ಪುಟ:ನಾಸ್ತಿಕ ಕೊಟ್ಟ ದೇವರು.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೨

ಮೇಲ್ನುಡಿ

ಕ್ಯಾರಿಯರ್ಗೆ ಸೇರಿಸುತ್ತಾಳೆ ಅವಳು. ಮಾಡಿದ ಅಕಾರ್ಯದ ಪರಿಣಾಮ
ವಾಗಿ ತಲೆತಿರುಗಿ ಬೀಳುವುದರಲ್ಲಿರುತ್ತಾಳೆ. ಈ ಬವಳಿಗೆ ಸುತ್ತಣವರು
ಅಪಾರ್ಥವನ್ನೇ ಮಾಡುತ್ತಾರೆ. ಮನೆಗೆ ಹೊರಟವಳು, ಶಾರದಾ,
ಹಿಂತಿರುಗಿ ಬಂದು ಕಾರ್ಖಾನೆಯ ಯಜಮಾನರಿಗೆ ತನ್ನ ತಪ್ಪನ್ನು ತೋಡಿ
ಕೊಳ್ಳುತ್ತಾಳೆ. ಹಿರಿಯರೂ, ಉದಾರಿಗಳೂ ಆದ ಅವರು ನಡೆದುಕೊಂಡ
ರೀತಿ, ತೋರಿಸಿದ ಮರುಕ ಅಪರೂಪವಾದುದು. ಶಾರದಾ ಮತ್ತೆ ಆ
ಕೆಲಸಕ್ಕೆ ಹಿಂದಿರುಗಲಿಲ್ಲ.
ಇದೇ ಸಮಯದಲ್ಲಿ ರೋಗಪೀಡಿತನಾಗಿದ್ದ ನಾಣಿ ಆಸ್ಪತ್ರೆಯಿಂದ
ಮನೆಗೆ ಬರುವ ವೇಳೆಗೆ, ಅವನಿಗೆ ಪ್ರಿಯವಾದ ಬಣ್ಣವೂ ಬೇರೆಯಾಗಿತ್ತು.
ಅದು ನೀಲಿಯಲ್ಲ ಈಗ ಬಿಳಿ. ಸರಿಯೇ, ಶಾರದೆಯ ಹೆಸರೂ ಬಿಳಿಯನ್ನೆ
ಸೂಚಿಸುತ್ತದೆ. ನಾಣಿಯ ಆಸೆಯೂ ಬಿಳಿ. ಶುಭ್ರಜೀವನದ ಸಂಕೇತ
ವಾಗಿ ಅವರ ಬಿಳಿ ಬಟ್ಟೆಯ ಅಪೇಕ್ಷೆ ಮುಂದುವರಿಯುತ್ತದೆ.
ಈ ಕಥೆಯಲ್ಲಿ ಶಾರದೆಯ ಅಂತರಂಗದ ತುಮುಲದ ಚಿತ್ರ ಚೆನ್ನಾಗಿದೆ.
ಅದೇ ಕಥೆಯ ರಸಸ್ಥಾನ. ಮಿಕ್ಕ ಭಾಗಗಳು ಅದಕ್ಕೆ ಪೋಷಕ ಅಷ್ಟೇ.
ಕಥೆಯ ಕರುಣರಸ ಚಿತ್ರಣದಲ್ಲಿ 'Sentimental' ಸ್ವಭಾವವಿದ್ದರೂ
ಶೈಲಿಯ ಸತ್ವದಿಂದ ಈ ಕಥೆ ಆಕರ್ಷಕವಾಗಿದೆ.

ಡಿ ಲಕ್ಸ್
ಡಿ ಲಕ್ಸ್ ಗಾಡಿಯಲ್ಲಿನ ಪ್ರಯಾಣ , ಅದರ ವಿವಿಧ ಸ್ವರೂಪಗಳನ್ನು
ನಾವಿಲ್ಲಿ ಕಿಂಚಿತ್ ದರ್ಶಿಸುತ್ತೇವೆ. ಇಲ್ಲಿರುವ ಬೇರೆ ಬೇರೆ ವ್ಯಕ್ತಿಗಳು
ನಡವಳಿಕೆಯನ್ನೂ ಮಾತುಗಳನ್ನೂ ನಾವು ಆಸಕ್ತಿಯಿಂದ ಪರಿಶೀಲಿಸು
ತ್ತೇವೆ. ಕೊನೆಗೆ ರಾಮನ್ ಪಡೆದ ಅನುಭವನ್ನು ಸವಿಯುತ್ತೇವೆ. ಈ
ಕಥೆಯಲ್ಲಿನ ಬಹು ಸ್ವಾರಸ್ಯಮಯವಾದ ತರುಣಿಯ ಚಿತ್ರ ನಮ್ಮಲ್ಲಿ
ನಗೆಯನ್ನು ಉಕ್ಕಿಸುತ್ತದೆ. ಕಥೆಯಲ್ಲಿ ಹಾಸ್ಯದ ಹಿಂದೆ ತೀವ್ರ
ವಿಡಂಬನೆಯಿದೆ. 'ಡಿ ಲಕ್ಸ್' ಅಂದರೆ ಸುಖಸಮೃದ್ದಿಯಿಂದ ಕೂಡಿದ,
ವಿಸ್ತಾರವಾದ ಎಂಬ ಅರ್ಥವಿದೆ. ಇದು ವಸ್ತುಗಳಿಗೆ ಅನ್ವಯಿಸಬಹುದು.
ಈ ಕಥೆಯಲ್ಲಿನ ಪ್ರಯಾಣಿಕನೇ 'ಡಿ ಲಕ್ಸ್'. ಅವನ ನಡೆವಳಿಕೆಯಲ್ಲೆಲ್ಲ
ಈ 'ಡಿ ಲಕ್ಸ್' ಗುಣ ನಿರೂಪಿತವಾಗಿದೆ.

-ಜಿ. ವೆಂಕಟಸುಬ್ಬಯ್ಯ