ಪುಟ:ನಾಸ್ತಿಕ ಕೊಟ್ಟ ದೇವರು.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೯೦

ನಾಸ್ತಿಕ ಕೊಟ್ಟ ದೇವರು

ವಿಶ್ವನಾಥಯ್ಕನವರ ಗಂಟಲು ಬಿರುಕು ಬಿಟ್ಟಿತ್ತು.
ಅವರಾಕೆ ಬಂದು ಹಜಾರದ ಬಾಗಿಲ ಮರೆಯಲ್ಲಿ ನಿಂತಿದ್ದರು. ಗಂಡನ ಆ ಪ್ರಶ್ನೆ ಕೇಳಿದೊಡನೆ ಅವರು ಗೋಳಾಡಿದರು :
"ಅಯ್ಯೋ! ಎಂಥಾ ಮಾತು ಆಡ್ತೀರಿ ಅಂದ್ರೆ. . ."
ವಿಶ್ವನಾಥಯ್ಯ ಕೂಗಾಡಿದರು:
"ಸತ್ತಾಗ ಅನ್ನದೆ, ಇನ್ನೇನು-ಹುಟ್ಟಿದಾಗ ಅನ್ಬೇಕೆ?”
ತಾಯಿ ಮಗನತ್ತ ತಿರುಗಿದರು:
"ಪ್ರಸಾದು-ಏನೋ ಇದೆಲ್ಲಾ?”
ಪ್ರಸಾದನ ಗಂಟಲೊಣಗಿತು.
ಕಂಪಿಸುವ ಸ್ವರದಲ್ಲಿ ಅವನೆಂದ:
"ಅಮ್ಮ ನಾನು ನಾಳೆಯ ಯೋಚ್ನೆ ಮಾಡ್ತಿದೀನಿ. ಆದರೆ ಅಣ್ಣಯ್ಯ ನನ್ನ ದಾರಿಗೆ ಕಲ್ಲು ಹಾಕ್ತಿದ್ದಾರೆ, ಅಮ್ಮ."
“ಹೂಂ-ಕಣೋ. ಕಲ್ಲು ಹಾಕ್ತಿದೀನಿ-ಕಲ್ಲು! ನಾನು-”
ಮಾತನ್ನು ವಿಶ್ವನಾಥಯ್ಯ ಅಷ್ಟಕ್ಕೆ ನಿಲ್ಲಿಸಿದರು. ರಸ್ತೆಯಿಂದಹಿತ್ತಿಲಿನೊಳಕ್ಕೆ ಬರತೊಡಗಿದ್ದ ಹಳೆಯ ಪಾದರಕ್ಷೆಗಳನ್ನೂ ಮಾಸಿದಧೋತರವನ್ನೂ ಅವರು ಕಂಡರು.
ಈ ಘಳಿಗೆಯಲ್ಲಿ ಬರಬೇಕೆ ಈತ?
ತಮ್ಮ ಎಲ್ಲ ಭಾವನೆಗಳನ್ನೂ ಹತ್ತಿಕ್ಕಿ, ಮುಗುಳು ನಗೆಯ ಮುಖವಾಡ ಧರಿಸಿ, ಬಂದ ಮನುಷ್ಯನನ್ನು ತಾವು ಸ್ವಾಗತಿಸಬೇಕು.
ವಿಶ್ವನಾಥಯ್ಯ ಮುಖಭಾವವನ್ನು ಮಾರ್ಪಾಟುಗೊಳಿಸುವುದಕ್ಕೆ ಮುನ್ನವೇ, ಅಂಗಳ ದಾಟಿ ಮನೆಯ ಮೆಟ್ಟಿಲುಗಳ ಮೇಲೆ ನಿಂತ ವ್ಯಕ್ತಿ ಅಂದಿತು:
"ನಮಸ್ಕಾರ. ಸಾಯಂಕಾಲ ಬರೋಣಾಂತಿದ್ದೆ. ಆದರೆ ರಾಹುಕಾಲ. ಈಗ್ಲೇ ಹೋಗೋದು ಮೇಲು ಅನಿಸ್ತು. ನನಗೇನೋ ಇವತ್ತು ರಜಾ. ಆದರೂ ನೀವು ಮಲಗಿರ್ತೀರೇನೋ ಅಂತ...”
ಮಲಗುವುದರ ಹೊರತು ಬೇರೆ ಕೆಲಸವೇನಿದೆ ತನಗೆ? ಎಂದು ವಿಶ್ವನಾಥಯ್ಯ ಮನಸಿನೊಳಗೇ ಕಹಿಯಾಗಿ ಅಂದುಕೊಂಡರು.