ಪುಟ:ನೋವು.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೮೮ ನೋವು ನಾಗಮ್ಮ ಆಡಿದ್ದನ್ನೇ ಆಡಿದರು : "ಓಗ್ತೀನಿ ಅಂತ ಒಂದು ಮಾತು ಯೋಳಿದ್ದಿದ್ರೆ ನಾ ಬಿಡ್ತಿದ್ನಾ ?" ಬೇಸತ್ತ ಗೌಡರೆಂದರು "ಓಗ್ಲಿ ಬುಡು. ಏಟು ಸಾರೆ ಅದನ್ನೇ ಅ೦ತಿಯಾ ?" ದಂಡೆಯಲ್ಲಿ ನೆರೆದಿದ್ದವರೆಲ್ಲ ನುಡಿದುದಿಷ್ಟೆ : ಅಡಿ ಜಾರಿ ಪ್ರಮಾದವಾಯಿತು. నిజ, నిజ. ಊದೇಶಪೂರ್ವಕವಾಗಿ ಸುಬ್ಬಿ ನೀರಲ್ಲಿ ಬಿದ್ದಳೆ೦ಬ ಯೋಚನೆ ಕೂಡಾ ಸರಿಯಲ್ಲ, ಆದರೂ ಮರಿಚೇಳೊಂದು ಬಾಲದ ಕೊಂಡಿ ಎತ್ತಲು ನೋಡುತ್ತಿತ್ತು, ಇರಬಹುದೆ? ತಾನಾಗಿಯೇ ಸುಬ್ಬಿ-? ಛಕ್ !-ಎಂದು ಧ್ವನಿ ಹೊರಡಿಸಿ ಗೌಡರು ಮನಸ್ಸಿನಿಂದ ಆ ಚೇಳನ್ನು ಕಿತ್ತು ದೂರ ಎಸೆದರು. ನಗರಕ್ಕೆ ಹೇಳಿ ಕಳುಹಿಸಿ ಮಗನನ್ನು ಕರೆಸುವುದು ಮೇಲಲ್ಲವೆ?-ಎಂದು ಒಮ್ಮೆ ಗೌಡರಿಗೆ ಅನಿಸಿತು. ಬಹಳ ಹೊತ್ತಿನ ನಿದ್ದೆಯ ಬಳಿಕ ಎಚ್ಚೆತು ತಂದೆಯ ಮುಖ ನೋಡಿ ಸುಭದ್ರೆ ನಸುನಕ್ಕಾಗ, ಮಗನನ್ನು ಕರೆಸುವ ಯೋಚನೆಯನ್ನು ಗೌಡರು ಬಿಟುಕೊಟ್ಟರು. ಒಂದಿಷ್ಟು ಬಿಸಿ ಗಂಜಿ ಸೇವಿಸಿದ ಮೇಲೆ ಸುಭದ್ರೆ ಅಂದಳು : " ನದೀಲಿ ಏನೋ ಬೆಳ್ಳಗೆ ಕಾಣಿಸ್ತು, ಅಪ್ಪ, ಅಕಾ ಅಂದೆ. ಅಡಿ ಜಾರು." ತಾನು ಒಂದು ಹೆಜ್ಜೆ ಮುಂದಿಟುದನ್ನು ಅವಳು ಬಲ್ಲಳು. ಯಾಕೆ? ಯಾಕೆ ಇಟ್ಟಳು ? ಅವಳಿಗೆ ತಿಳಿಯದು. ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳಲಾರಳು ಆಕೆ. ಗೌಡರೆಂದರು ; "ಓಗ್ಲಿ ಬುಡು. ಪರಮಾತ್ಮ ಕಾಪಾಡ್ದ." " ಒಂದೆರಡು ದಿನಗಳಲ್ಲಿ ಸುಬ್ಬಿ ಓಡಾಡತೊಡಗಿದಳು. ನದಿಯ ಪ್ರವಾಹ ಕಡಮೆಯಾದ ದಿನ ಅವಳು ಅಂಗಳಕ್ಕಿಳಿದು, ಹಗಲು ಬೆಳಕಿನಲ್ಲಿ ತನ್ನ ಪರಿಸರವನ್ನು ದಿಟ್ಟಿಸಿದಳು. ಎಲ್ಲವೂ ಹೊಸದಾಗಿ ಆಕೆಗೆ ಕಂಡಿತು. ನೆಗರದಲ್ಲಿ ಮದುವೆ ಮುಗಿಸಿಕೊಂಡು ಶ್ರೀನಿವಾಸಯ್ಯ ತಮ್ಮ ಪರಿವಾರದೊಡನೆ ಆ ದಿವಸ ಕಣಿವೇಹಳ್ಳಿಗೆ ವಾಪಸಾದರು. ಹಳ್ಳಿಯ ಜನ ಕೆಲಸ ಬೊಗಸೆಗಳನ್ನು ಬಿಟ್ಟು ಅಯ್ಯನವರ ಸೊಸೆಯರನ್ನು ನೋಡಲು ಹೋದರು. ವಿಷು ಮೂರ್ತಿಯವರ ಸಂಧಾನದ ಫಲವಾಗಿ ಕಾಮಾಕ್ಸಿ ಆರತಿಯರಿಬ್ಬರ ತಮ್ಮ ಗಂಡಂದಿರನ್ನು ಹಿಂಬಾಲಿಸಿದ್ದರು. ಕಣಿವೇಹಳ್ಳಿಗೆ ನಾಲ್ಕು ದಿನ ಬಿಟು ಹಳ್ಳಿಯಲ್ಲಿ ಆರತ್ಯಕ್ಷತೆ ಎಂದು ಗೊತ್ತಾಗಿತ್ತು. " ನೀವೇನೂ ಯೋಚಿಸ್ಬೇಡಿ ಶ್ರೀನಿವಾಸಯ್ಯನವರೇ, ದಂಡು ಬಂದ ಹಾಗೆ ಬರ್ರ್ಥಿವಿ ಅವತ್ತು." ಎಂದಿದ್ದರು ವಿಷ್ಣುಮೂರ್ತಿ. ದುಃಖಿ ಗೋಪಾಲನೊಬ್ಬನೇ. ಹೆಂಡತಿಯನ್ನು ಕರೆದುಕೊಂಡು ನಗರಕ್ಕೆ ಹೋಗಲೆಂದು ಆತ ಸೋಮಪುರ ತಲಪಿದ್ದ. ಭಾಗೀರಥಿ ಅಲ್ಲಿ ಹರ್ಷಚಿತ್ತಳಾಗಿದ್ದಳು. ಗೋಪಾಲ ವಿಳಂಬವಿಲ್ಲದೆ, " ನಾಳೆ ಬೆಳಗ್ಗೆ ಹೊರಡ್ಬೇಕಲ್ಲ," ಎಂದ ಹೆಂಡತಿಯೊಡನೆ. ಅವಳ ದೃಷ್ಟಿ ಗಂಡನನ್ನು ನೇರವಾಗಿ ಸಂಧಿಸಿತು.