ಪುಟ:ನೋವು.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನೋವು ೧೯೫

ಭಾಗೀರಥಿ ಉಲ್ಲಸಿತಳಾಗಿದ್ದಳು. ಕಾಮಾಕ್ಷಿಯೇನೋ ಧಡೂತಿ ವ್ಯಕ್ತಿಯೇ. ಆರತಿ ಮಾತ್ರ ಸೀರೆ ಉಟ್ಟ ದೊರೆಸಾನಿ.

     ಶ್ರೀಪಾದನನ್ನು ಅವರ ಕೈಗೆ ಕೊಡದೆ, “ನನ್ನ ಕಾಯಿಲೆಯಿಂದ ಮದುವೆ ತಪ್ಪೋಯ್ತು ," ಎಂದಳು ಭಾಗೀರಥಿ ಓರಗಿತ್ತಿಯರೊಡನೆ.
     ದೊಡ್ಡಮ್ಮ ಅವಳನ್ನು ಒಳಕ್ಕೆ ಕರೆದು, " ಆರತ್ಯಕ್ಷತೆ ಮುಗಿಸ್ಕೊಂಡು ಹೆಂಡತಿ ಜತೆ ಪದ್ಮ ನಗರಕ್ಕೆ ಹೋಗ್ತಾನೆ. ಅಷ್ಟರವರೆಗೆ ನನ್ಜತೆ ಮಲಕೊ, ಭಾಗೀ. ಸಹಾಯಕ್ಕೆ ಇರ್ಲೀಂತ ಜಲಜೇನ ಇಲ್ಲಿ ಇರಿಸ್ಕೊಂಡಿದೀನಿ. ಆಮೇಲೆ ಅವಳೂ ಹೊರಹೋಗ್ತಾಳೆ," ಎಂದರು.

" ಆಗಲಿ ದೊಡ್ಡಮ್ಮ," ಎಂದಳು ಭಾಗೀರಥಿ. ಆರತ್ಯಕ್ಷತೆಯ ದಿನ ಬೆಳಗ್ಗೆ ವಿಷ್ಣುಮೂರ್ತಿಯವರು ಹೇಳಿದ್ದಂತೆ ನಗರದಿಂದ 'ದಂಡು' ಬಂದಿಳಿಯಿತು.

  ದುಂಡಿನವರು ನಾಲ್ಕು ಗ್ಯಾಸ್ ದೀಪಗಳನ್ನು ತಂದಿದ್ದರು. 

ಆ ಜನ ಆ ಸಡಗರ-ನಗರದ ಥಳಕು. ಕಣಿವೇಹಳ್ಳಿಯವರು ಬೆರಗಾಗಿ ನೋಡಿದರು. ಆರತ್ಯಕ್ಷತೆ, ಭೂರಿ ಭೋಜನ. ಶಾಮೇಗೌಡರು ಬಂದರು. " ಏನು ಶಾಮಣ್ಣ? ನಾಗಮ್ಮ-ಸುಬ್ಬಿ ಬರಲಿಲ್ವಲ್ಲ," ಎಂದರು ದೊಡ್ಡಮ್ಮ, ಮುಗುಳುನಗೆ ಬೀರಿ, " ನಾನೊಬ್ನೇ ಬಂದೆ," ಎಂದರು ಗೌಡರು. " ನಗರದಲ್ಲಿ ಧಾರೆಗೆ ರಂಗಣ್ಣನೂ ಬರ್ಲಲ್ಲ," ಎಂದು ದೊಡ್ಡಮ್ಮ ತಮ್ಮ ಬೇಸರವನ್ನು ತೋಡಿಕೊಂಡರು. ಗೌಡರು ಸುಳ್ಳಾಡಬೇಕಾಯ್ತು : "ರಂಗನಿಗೆ ತಿಳಿಸಿದ್ದೆ. ಅದೇನು ತೊಂದರೆಯಾಯ್ತೊ ?” "ನಾವು ನಗರಕ್ಕೆ ಹೋದ ಸಮಯ ಸುಬ್ಬಿ ನೀರಿಗೆ ಬಿದ್ಲೂಂತ ಕೇಳ್ದೇ..." " ಊಂ. ಕಾಲು ಜಾರ್ತು." " ಈಗ ಚೆನ್ನಾಗಿದಾಳಾ ?” "ಓ..."

     ಗೌಡರು ಎರಡು ಜೋಡಿಗೂ ಐವತ್ತು ಐವತ್ತು ರೂಪಾಯಿಗಳ ಉಡುಗೊರೆ

ಓದಿದರು.

     ದೊಡ್ಡಮ್ಮ ಸಿಹಿ ಭಕ್ಷ್ಮಗಳನ್ನು ಪಾತ್ರೆಯಲ್ಲಿಟ್ಟು ಗಜಾನನನ ಕೈಲಿ ಗೌಡರ ಮನೆಗೆ ಕಳುಹಿಸಿದರು.

... ಈ ಎಲ್ಲ ಸಂಭ್ರಮದಲ್ಲಿ ಭಾಗೀರಥಿಯನ್ನು ಕೇಳುವವರೇ ಇರಲಿಲ್ಲ. ಅಡುಗೆ ಮನೆಯ ಉಸ್ತುವಾರಿ ಅವಳದು. ದೊಡ್ಡಮ್ಮ ತನ್ನದೊಂದು ದೃಷ್ಟಿಯನ್ನು ಆಕೆಯ ಮೇಲೆಯೇ ಇಟ್ಟಿದ್ದರು.