ಪುಟ:ನೋವು.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು

ತನ್ನನ್ನು ಯಾರೋ ಚುಚ್ಚಿ ತಿವಿದಂತಾಗಿ ದೊಡ್ಡಮ್ಮ ತಲೆಯ ಮೇಲಿನ ಸೆರಗನ್ನು ಸರಿಪಡಿಸಿಕೊಂಡು, " ಒಬ್ಬೊಬ್ಬರಾಗಿ ಸ್ನಾನ ಮಾಡಿ. ಅಡುಗೆ ತಡವಾಗೊಲ್ಲ,” ಎಂದು ನುಡಿದರು. " ಒಂದನ್ನ ಸಾರು ಸಾಕು," ಎಂದರು ಆರತಿಯ ತಾಯಿ. ಮುತ್ತು ಉದುರಿತಲ್ಲ ಎಂದು ಅಷ್ಟಕ್ಕೇ ಸಮಾಧಾನ ಪಟ್ಟುಕೊಂಡು ದೊಡ್ಡಮ್ಮ ಬೇಗಬೇಗನೆ ಒಳಗಡೆ ಹೆಜ್ಜೆ ಇಟ್ಟರು. ಹೆಣ್ಣು ಕೊಟ್ಟವರಿಗೆ ಇಷ್ಟೊಂದು ಧಿಮಾಕು ? ಆಕೆಯ ಸ್ಥಾನದಲ್ಲಿ ತಾವೇ ಇದ್ದಿದ್ದರೆ ತಮ್ಮ ವರ್ತನೆ ಹೇಗಿರುತ್ತಿತು ? ಮನೆಯವರು ಬೇಡವೆಂದರೂ ತಾವು ಮಡಿಯುಟ್ಟು ಅಡುಗೆ ಕೆಲಸದಲ್ಲಿ ನೆರವಾಗುತ್ತಿದ್ದರು. ಅವರು ಹೋಗಲಿ, ಆ ಹುಡುಗಿಯಾದರೂ ಸಹಕರಿಸಬೇಡವೆ?

ಕೊಳವೆಯನ್ನು ಕೈಗೆತ್ತಿಕೊಂಡು ಒಲೆಯ ಬೆಂಕಿಯೂದುತ್ತ, ತಮ್ಮ ಮೆದುಳನ್ನು ಆವರಿಸಿದ್ದ ಬೇಸರವನ್ನು ದೊಡ್ಡಮ್ಮ ಝಾಡಿಸಿದರು... ...ಮಧಾಹ್ನದ ಹೊತ್ತಿಗೆ ಶ್ರಿನಿವಾಸಯ್ಯನವರ ಮನೆ ಬಿಕೋ ಎನ್ನುವಂತಾಯಿತು. ಮನೆಗೆ ಬಂದ ಭಾಗ್ಯಲಕ್ಷ್ಮಿಯರಿಬ್ಬರ ಹೊರತಾಗಿ ಉಳಿದವರೆಲ್ಲ ಹೊರಟು ಹೋದರು. ಅಲ್ಲಿಯೇ ಬಸ್ ನಿಲ್ದಾಣವಿದ್ದಿದ್ದರೆ ಆರತಿಯೂ ಹೋಗುತ್ತಿದ್ದಳು ಟಾಟಾ ಮಾಡಲು. ಕಾಮಾಕ್ಷಿ ಕೂಡಾ. ಆದರೆ ಹೋಗುತ್ತ ಬರುತ್ತ ಎರಡೆರಡು ಮೈಲಿ ನಡೆಯುವವರು ಯಾರು? ಬಸ್ಸು- ಲಾರಿ-ಕಾರು ಯಾವುದಾದರೂ ವಾಹನ ಹತ್ತಿಸಲು ಹೇಗೂ ಅವರ ಗಂಡಂದಿರಿ ದ್ದರಲ್ಲ ?

ಗೋವಿಂದನ ಜತೆಗೆ ಪದ್ಮನಾಭ; ಅವರಿಗೆ ಸಂಗಡಿಗನಾಗಿ ಗಜಾನನ. ಜಲಜಾ ದೊಡ್ಡಮ್ಮನಿಗೆ ಅಂದಳು : " ನಾನು ಹೋಗ್ಬರ್ತೀನ್ರೀ." ಇವರಿಗೆ ವಿಸ್ಮಯ. ಇಷ್ಟು ಬೇಗನೆ ಹೊರಡುವ ತವಕ ಈ ಹುಡುಗಿಗೆ ? " ನಗರಕ್ಕೆ ನೀನೂ ಹೋಗ್ತೀಯಾ ?” –ದೊಡ್ಡಮ್ಮ ಕೇಳಿದರು. " ಇಲ್ಲವಪ್ಪ. ನಾನಿನ್ನು ನಗರಕ್ಕೆ ಹೊರಡೋದು ಕಾಮಾಕ್ಷಿ ಜತೆಗೆ. ನಮ್ಮನೆಗೆ ಹೋಗ್ತೀನಿ. ಯಾವನೋ ರೈತ ಕಾವಲಿದಾನಂತೆ. ನಮ್ಮವರೂ ರಸ್ತೆತನಕ ಹೋಗಿದಾರೆ." " ಸರಿಯಮ್ಮ ಒಬ್ಬಳೇ ಹೋಗ್ಬೇಡ. ಬೀರನನ್ನೆ ಜತೆಗೆ ಕಳಿಸ್ತೀನಿ.” ತಮ್ಮ ಆಗಿನ ಮನಸ್ಥಿತಿಯಲ್ಲೂ ಜಲಜೆಗೆಂದೇ ಕೊಂಡು ತಂದಿದ್ದ ಹೊಸ ಸೀರೆಯನ್ನು ಅವಳಿಗೆ ನೀಡಲು ದೊಡ್ಡಮ್ಮ ಮರೆಯಲಿಲ್ಲ. ಪಡಸಾಲೆಯಲ್ಲಿ ತಂದಿಟ್ಟು, ತಾವು ದೂರ ನಿಂತು, " ತಗೊಮ್ಮ," ಎಂದರು. ಜಲಜೆ ಬೇಡವೆನ್ನಲಿಲ್ಲ. ಕಾಮಾಕ್ಷಿ ಅಂದಳು: “ನಾಳೆ ಬೆಳಗ್ಗೆ ಬಂದ್ಬಿಡು, ಜಲ್ಜಾ. ಇಲ್ಲಿ ನನಗೆ ಬೇಜಾರು." "ಆಗಾಗ್ಗೆ ಬರ್ತಿರ್ತಾಳೆ ಇಲ್ಲಿಗೆ," ಎಂದು ಹೇಳಿ ದೊಡ್ಡಮ್ಮ ಸುಮ್ಮನಾದರು.