ಪುಟ:ನೋವು.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ల౧

 “ಓಹ್ಹ್! ಇವತ್ತು ಮಳೆ ಸುರಿದೇ ಸುರೀತದೆ," ಎಂದುಕೊಂಡು ರಂಗಣ್ಣ ಮನೆಯ ಕಡೆಗೆ ಬೇಗ ಬೇಗನೆ ಕಾಲಿರಿಸಿದ.
 ನಡೆಯುತ್ತ ಆತ ಯೋಚಿಸಿದ:
 ಸುಬ್ಬಿಗೆ ತಾನು ಔಷಧಿ ಕೊಟ್ಟು ಗುಣಮಾಡಿದೆನೆಂಬ ಸುದ್ದಿ ಊರೆಲ್ಲ ಹಬ್ಬಿರಬೇಕು. ಸದ್ಯಃ ಸ್ವಲ್ಪದರಲ್ಲಿ ಗುಣವಾಯಿತಲ್ಲ ! ' ಜ್ವರ ಏನೇನೂ ಇಳಿಮುಖವಾಗದಿದ್ದರೆ ಟೈಫಾಯ್ಡಿಗೆ ತಿರುಗಿದೆ ಅಂತ ಭಾವಿಸಬೇಕು; ಹಾಗೇನಾದರೂ ಆದರೆ ಬಂದು ಹೇಳು'--ಎಂದಿದ್ದರು ಅವನ ಪ್ರೊಫೆಸರು. ಹಾಗೆ ಆಗಿರಲಿಲ್ಲ.
 ಪದ್ಮನ ಯೋಚನೆಯನ್ನು ಪೂರ್ತಿಯಾಗಿ ಬಿಟ್ಟಿರಬಹುದಲ್ಲವೆ ತಂಗಿ? ಆದರೆ ತನ್ನೊಡನೆ ಮಾತ್ರ ಅವಳ ನಡವಳಿಕೆ ಮೊದಲಿನಂತಿರಲಿಲ್ಲ. ಕೆಲವು ದಿನ ಸಿಟ್ಟಿರುವುದು ಸಹಜ. ಸ್ವಲ್ಪ ಕಾಲವಾದ ಮೇಲೆ ಆ ಸಿಟು ಇಳಿಯಲೇ ಬೇಕು. ಅಣ್ಣನಾದ ತಾನು ಬಯ್ದಿದ್ದರೆ ಅದು ತಂಗಿಯಾದ ತನ್ನ ಒಳಿತಿಗೆ ಅಂತ ತಿಳಿಯುವಷ್ಟು ಬುದ್ಧಿ ಇಲ್ಲವೆ ಅವಳಿಗೆ? 
 ಗಾಳಿ ಭೋರೆಂದಿತು. ರಂಗಣ್ಣ ಹರ್ಷಿತನಾದ. ಈ ಮೊದಲ ಮಳೆಯಾದೊಡನೆಯೇ ದುಡಿಮೆ ಆರಂಭ. ಮುಂಗಾರು ಮಳೆ ಶುರುವಾಗುವುದಕ್ಕೆ ಮುಂಚೆಯೇ ತಾನು ನಗರದಲ್ಲಿರ ಬೇಕು. ಅಷ್ಟು ದಿನ, ಹೊಲಗಳಲ್ಲಿ ನಡೆಯುವ ಚಟುವಟಿಕೆಯನ್ನು ತಾನು ಈಕ್ಷಿಸಬಹುದು...
 ಬೇಗ ಬೇಗನೆ ಹೆಜ್ಜೆ ಹಾಕಿದ ರಂಗಣ್ಣ, ದನಕರುಗಳು ತನಗಿಂತ ತುಸು ಮುಂದೆಯೇ ಮನೆಯ ಕಡೆಗೆ ಹೋಗುತ್ತಿದ್ದುದನ್ನು ಕಂಡ.
 ...ಮನೆಯೊಳಗೆ ಯಾರೂ ಇರಲಿಲ್ಲ. ಅತ್ತೆ ಕೊಟ್ಟಿಗೆಯಲ್ಲಿದ್ದರು.
 ಅದರ ಹಿಂಭಾಗದಲ್ಲಿ ಮರಗಳ ತೋಪಿನಲ್ಲಿ ಸುಭದ್ರೆಯನ್ನು ಕಂಡಂತಾಯಿತು ರಂಗಣ್ಣ ನಿಗೆ. ಆತ ಅಲ್ಲಿಗೆ ಹೋದ.
 ಕಳೆದ ಮಳೆಗಾಲದಲ್ಲಿ ಒಮ್ಮೆ ಬಿರುಗಾಳಿಗೆ ಸಿಲುಕಿ ಒಂದು ಮಾವಿನ ಮರ ಬೇರು ಸಹಿತ ಕಿತ್ತು ಬಿದ್ದಿತ್ತು. ರೆಂಬೆ ಕೊಂಬೆಗಳನ್ನು ಕತ್ತರಿಸಿ ಆದಮೇಲೆ ಕಾಂಡ ಅಲ್ಲಿಯೇ ಉಳಿದಿತ್ತು.
 ಅದರ ಮೇಲೆ ಸುಭದ್ರೆ ಕುಳಿತಿದ್ದಳು.
 ರಂಗಣ್ಣ ಅವಳನ್ನು ಸಮಿಾಪಿಸಿ "ಮಳೆ ಬರೋಹಂಗೈತೆ,” ಎಂದ.
 ಅವಳು ಹೂಂ ಎನ್ನಲಿಲ್ಲ. ನಿರ್ವಿಕಾರಭಾವದಿಂದ ಅಣ್ಣನ ಮುಖವನ್ನು ನೋಡಿ ದಳು.
 ರಂಗಣ್ಣ ದಿಮ್ಮಿಯ ಒಂದು ಮೂಲೆಯಲ್ಲಿ ಕುಳಿತ. ಆತನನ್ನು ನೇರವಾಗಿ ನೋಡ ಲಿಚ್ಛಿಸದೆ ಸುಭದ್ರೆ ವಿರುದ್ಧ ದಿಕ್ಕಿನಲ್ಲಿ ತನ್ನ ದೃಷ್ಟಿಯನ್ನು ಹರಿಯಬಿಟ್ಟಳು.
 ರಂಗಣ್ಣ ಕೇಳಿದ: 
 "ಇನ್ನೂ ನಿತ್ರಾಣ ಅನಿಸ್ತದಾ?” 
  ಸುಭದ್ರೆ ತುಟಿಗಳನ್ನು ಬೇರ್ಪಡಿಸದೆ ತಲೆಯನ್ನಷ್ಟೆ ಅಲ್ಲಾಡಿಸಿ ಇಲ್ಲವೆಂದಳು. 
 "ಅವತ್ತು ಏನೋ ಅಂದೆ ಅಂತ ಇನ್ನೂ ಮುನಿಸ್ಕೊಂಡಿದೀಯಾ?" 
 ಸುಭದ್ರೆ–ನಿರುತ್ತರ. 
 "ನನ್ನ ನೀನು ಅರ್ಥ ಮಾಡ್ಕೋಬೇಕು ಸುಬ್ಬೀ.”

6