ಪುಟ:ನೋವು.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು

  "ಬಂದೆ ಅಪ್ಪ."
  ...ಸುಬ್ಬಿ ತಂದೆಯ ಕೋಟನ್ನು ಜಗಲಿಯಲ್ಲೇ ತೂಗುಹಾಕಿದಳು, ನೀರು ತೊಟ್ಟಿಕ್ಕಿ ಬೆಳಗಾಗುವ ಹೊತ್ತಿಗೆ ಒಣಗಲೆಂದು. ಉಳಿದ ಉಡುಪುಗಳನ್ನು ಹಿಂಡಿ ಪಡಸಾಲೆಯಲ್ಲಿ ಹಗ್ಗದ ಮೇಲೆ ಹರಡಿದಳು.
   ಮನೆ ಒಂದೆರಡು ಕಡೆ ಸೋರುತ್ತಿತ್ತು. ಆ ನೀರನ್ನು ಹಿಡಿಯಲೆಂದು ನಾಗಮ್ಮ ಪಾತ್ರೆಹಳನ್ನು ತಂದಿಟ್ಟಳು.
   "ಅಡ್ಡ ಮಳೆಗೆ ಯಾವಾಗ್ಲೂ ಅಂಗೇನೇ," ಎಂದರು ಗೌಡರು.
   ಮನೆಯೊಳಕ್ಕೆ ನುಗ್ಗಿದ ಕತ್ತಲನ್ನು ಕಂದೀಲು ಇದಿರಿಸಿತು.
   ನಾಗಮ್ಮ ಒಳಗೆ ಊಟಕ್ಕೆ ಅಣಿಮಾಡುತ್ತಿದ್ದಾಗ, ಹೊರಗೆ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಗಾಳಿಯ ಕೆಲಸ–ಎನಿಸಿತು ಗೌಡರಿಗೆ.
   ಎರಡು ನಿಮಿಷ ಬಿಟ್ಟು ಮತ್ತೆ ಬಾಗಿಲ ಸದ್ದಾಯಿತು. ಧಪಧಪ ಬಡೆತವಲ್ಲ; ಕ್ಷೀಣ ಸಪ್ಪಳ.
   "ಯಾರದು?" ಎಂದರು ಗೌಡರು ಮಳೆಯ ಜೊರೋ ಧ್ವನಿಯನ್ನು ಮಿಾರಿಸಿ. 
   ಉತ್ತರ ಬರಲಿಲ್ಲ. ಬದಲು ಮನುಷ್ಯನ ಕೆಮ್ಮು ಮಳೆಯ ಸದ್ದಿನೊಡನೆ ಬೆರೆಯಿತು.
   ಗೌಡರು ಎದ್ದು ಬಂದು ಹೊರಬಾಗಿಲನ್ನು ತೆರೆದರು.
   ಅಲ್ಲಿ ಒಂದು ಬದಿಯಲ್ಲಿ, ಮಳೆಯಿಂದ ಪೂರ್ತಿ ತೋಯ್ದಿದ್ದ ಒಬ್ಬ ಮನುಷ್ಯ ಮೈ ಮುದುಡಿಕೊಂಡು ಎರಡೂ ಕೈಗಳನ್ನು ಎದೆಯ ಮಟ್ಟಕ್ಕೊಯ್ದು ಜೋಡಿಸಿ ನಿಂತಿದ್ದ.
   "ಯಾರಪ್ಪ?” ಎಂದರು ಗೌಡರು ದರ್ಪದಿಂದ.
   ತಗ್ಗಿದ ಸ್ವರದಲ್ಲಿ ಉತ್ತರ ಬಂತು:
   "ನಾನು."
   ಧ್ವನಿಯನ್ನು ಗುರುತಿಸಿದ ಗೌಡರು ಉದ್ಗರಿಸಿದರು: 
   "ಅಬ್ದುಲ್ಲ!" 
                          ೧೧
   "ಬಿಡು, ಏಳು," ಎಂದು ಗೌಡರು ಎಷ್ಟು ಹೇಳಿದರೂ, ಅಬ್ದುಲ್ಲ ಪಾದಗಳನ್ನು ಬಿಡಲಿಲ್ಲ. ಮೈಯಿಂದ ಒಸರುತ್ತಿದ್ದ ಮಳೆಯ ನೀರಿನಿಂದಲ್ಲ, ಬೆಚ್ಚನೆಯ ಕಣ್ಣೀರಿನಿಂದ ಗೌಡರ ಪಾದಗಳನ್ನು ಅವನು ತೊಳೆದ.
    ಗೌಡರು ಮತ್ತೊಮ್ಮೆ ಅಂದರು:
    "ಬಿಡು ಅಬ್ದುಲ್ಲ. ಏಳು !" 
    ಮೂಗು ಬಾಯಿಗಳಿಂದ ಬಿಸಿಯುಸಿರನ್ನು ಹೊರಬಿಡುತ್ತ ರೋದಿಸುತ್ತಿದ್ದ ಅಬ್ದುಲ್ಲ ಗೊಗ್ಗರ ಧ್ವನಿಯಲ್ಲಿ ಅಂದ: 
    "ನನಗೆ ಅಭಯ ಕೊಡಿ, ಒಡೆಯಾ."