ಪುಟ:ನೋವು.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ನೋವು


"ಕಾಲು ಬಿಡಪ್ಪ.”

"ಕಾಪಾಡ್ತೇನೇಂತೆ ಅಂದ್ರೇನೇ ನಾನು ಏಳೋದು, ಒಡೆಯ."

"ಉಚ್ಚಪ್ಪ, ಏಳು. ನಿನ್ನ ಜೀವಕ್ಕೇ ಆನಿಯಾಗೂದಿಲ್ಲ." ಗೌಡರು ಅಷ್ಟು ಹೇಳಿದ ಮೇಲೆ ಅಬ್ದುಲ್ಲ ತನ್ನ ಹಿಡಿತವನ್ನು ಸಡಿಲಿಸಿ ಮೆಲ್ಲನೆ ಎದ್ದು ನಿಂತ.

ಜಗಲಿಗೆ ಇರಿಚಲು ಬೀಸುತ್ತಿತು. "ಒಳಗ್ಬಾ,” ಎಂದರು ಗೌಡರು. "ಬ್ಯಾಡಿ ಒಡೆಯಾ. ನಾನಿಲ್ಲೇ ಇರುತ್ತೀನಿ." ಪಡಸಾಲೆಯಲ್ಲಿ ಇದ್ದೊಂದು ಕುರ್ಚಿಯನ್ನು ಗೌಡರು ದರದರನೆ ಎಳೆದುಕೊಂಡು ಬಾಗಿಲ ಬಳಿಗೆ ತಂದು, ಅದರ ಮೇಲೆ ಕುಳಿತರು.

    ಹೊರಗೆ ಯಾರೋ ಬಂದರಲ್ಲ, ಎಂದು ರಂಗಣ್ಣ ಪಡಸಾಲೆಯ ಬಾಗಿಲ ಕಡೆಗೆ ಹಣಿಕಿ ನೋಡಿದ.

ಅದನ್ನು ಕಂಡ ಗೌಡರೆಂದರು:

"ರಂಗ ಒಳಗೆ ಹೋಗು."

ಆದರೆ, ಆ ಅರ್ಧ ಕ್ಷಣದಲ್ಲಿ, ಬಂದಿದ್ದ ಮನುಷ್ಯನನ್ನು ರಂಗಣ್ಣ ಗುರುತಿಸಿದ್ದ. ಆತ ಹೇಳುವುದನ್ನು ಕೇಳಬೇಕೆನಿಸಿತಾದರೂ ತಂದೆಯ ಅಪೇಕ್ಷೆಯಂತೆ ಒಳಕ್ಕೆ ಮರೆಯಾದ.

"ಇದೇನೋ ಮಾಡಿಬಿಟ್ಟೆಯಲ್ಲಪ್ಪ, ಅಬ್ದುಲ್ಲ." ಎಂದು ಗೌಡರು ಆರಂಭಿಸಿದರು.

ಕಣ್ಣಗಳನ್ನು ಒರೆಸುತ್ತ, ನಡುವೆ ಬಿಕ್ಕುತ್ತ, ಅಬುಲ್ಲನೆಂದ:

"ಶೈತಾನ ನನ್ನನ್ನಿಡಿದ್ದಿಟ್ಟಿತ್ತು, ಒಡೆಯಾ. ಇಸ್ಟು ವರ್ಸ ನಾನು ನಟ್ಟಿದ್ದ ಬೆಳೆಸಿದ್ದು ಎಲ್ಲಾ ಒಂಟೋಯ್ತದಲ್ಲಾ ಅಂತ ನನ್ಕೆ ಉಚ್ಚಿಡ್ಡಂಗಾಗಿತು, ಒಡೆಯಾ. ಸಾಯಿ ಸಿದ್ರೂ ಸರಿ. ಅಂತ ಅನ್ಕಂಡಿದ್ದೆ. ಆದ್ರೆ ನಿಜವಾಗ್ಲೂ ಆವ್ನು ಸತ್ತೊಗ್ತಾನೆ ಅಂತ ತಿಳ್ಕೊಂಡಿರಲಿಲ್ಲ, ಒಡೆಯ, ಕೋರ್ಟ್ನಲ್ಲಿ ಅವನ್ಗೇ ಜಯ ಆತದೇಂತ ಗೊತ್ತಾಯ್ತು. ಆ ಸಿಟ್ನಲ್ಲಿ ಕಾದು ನಿಂತ್ಕೊಂಡು ಅವನ ಮ್ಯಾಕೆ ಆರಿ ಕತ್ತು ಇಸಕ್ದೆ, ಒಡೆಯ. ಸತ್ತೇ ಓದ. ಎಳ್ಕೊಂಡು ದಿಬ್ಬದೊಂಡದಾಗೆ ಬಿಟ್ಟು, ಹಟ್ಟಿಗ್ಬಂದು, ಚಿತ್ರಾಪುರಕ್ಕೋಗಿ ಮಗನಿಗೆ ಎಣ್ಣ್ ನೊಡ್ಕಂಬತ್ತೀನೀಂತ ಯಂಡತಿಗೇಳಿ ಹೊರೆಟು ಹೋದೆ, ಒಡೆಯಾ. ಇಂಗಾಯ್ತದೆ ಅಂತ ನಂಗೆ ಗೊತ್ತಾಗ್ತಿಲ್ಲ... "

ಸಾತ್ವಿಕನೆಂದೇ ಎಲ್ಲರೂ ಬಗೆದಿದ್ದ –ಗೋಹತ್ಯೆ ಮಾಡುವವನಲ್ಲ ಎಂದು ಆಣೆ ಇಟ್ಟು ನುಡಿದು ಅದರಂತೆಯೇ ಅಷ್ಟು ವರ್ಷ ನಡೆದಿದ್ದ– ಅಬ್ದುಲ್ಲ ಒಳಗಿನಿಂದ ಹೊಗೆಯಾಡಿ ಈ ರೀತಿ ಸಿಡಿಯಬಹುದೆಂದು ಯಾರು ಭಾವಿಸಿದ್ದರು?

ಅವನನ್ನೇ ದಿಟ್ಟಿಸಿ ನೋಡಿ ತಲೆ ಆಡಿಸಿ ಗೌಡರು ನಿಟ್ಟುಸಿರು ಬಿಟ್ಟರು.

అವರೆಂದರು:

"ಸಿಟ್ಟಿನ ಕೈಲಿ ಜುಟು ಕೊಟ್ಟೆ ಅಬ್ದುಲ್ಲ. ಈ ಕೆಲಸ ನೀನು ಮಾಡಬೇಕಾಗಿತ್ತು." 

"ಔದು, ಒಡೆಯಾ, ನಾನು ದೊಡ್ಡ ತಪ್ಪು ಮಾಡ್ದೆ, ಯಾವ ಸೀಕ್ಷೆ ಕೊಟ್ಟರೂ ನಾನು ಅನುಭೋಗಿಸ್ಬೇಕು."