ಪುಟ:ಪರಂತಪ ವಿಜಯ ೨.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೪

೧೧೫


ಕಾಮಮೋಹಿನಿ-ಎಲಾ ದುಷ್ಟ ! ಇಲ್ಲಿಂದ ಆಚೆಗೆ ತೆರಳು. ಪರಂತಪನು ಕಾಲಾಧೀನನಾಗಿದ್ದಾಗ, ನನ್ನ ತಂದೆಯು ನಿನ್ನ ಸೆರೆಯಲ್ಲಿ ಸಿಕ್ಕಿದ್ದಾಗ್ಯೂ, ನನ್ನನ್ನು ಕೆಡಿಸುವುದು ನಿನಗೆ ಎಂದಿಗೂ ಸಾಧ್ಯವಾದುದಲ್ಲ. ಈ ದುಷ್ಟ ಪ್ರಯತ್ನವನ್ನು ನೀನು ಮಾಡಿದಕೂಡಲೆ, ನೀನು ಯಮಪುರಿಗೆ ಪ್ರಯಾಣ ಮಾಡಬೇಕಾಗುವುದು. ಪರಂತಪನು ಕಾಲಾಧೀನನಾಗಿದ್ದಾಗ್ಯೂ, ನಿನ್ನ ದುಷ್ಟಪ್ರಯತ್ನಗಳೇ ನಿನ್ನನ್ನು ವಧಿಸದೆ ಇರಲಾರವು. ಎಚ್ಚರಿಕೆ ಯಾಗಿರು. ನನ್ನ ಸಾನ್ನಿಧ್ಯವನ್ನು ಬಿಟ್ಟು ಹೊರಟುಹೋಗು.
ಶಂಬರ-ಎಲೈ ದುಷ್ಟಳಾದ ಕಾಮಮೋಹಿನಿಯೇ ! ನೀನು ಬುದ್ದಿಶಾಲಿನಿಯಲ್ಲ. ನಿನ್ನ ಉನ್ಮತ್ತ ಪ್ರಲಾಪಗಳಿಗೆ ನಾನು ಹೆದರತಕ್ಕವನಲ್ಲ. ಪೂರ್ವಾಪರಗಳನ್ನು ಯೋಚಿಸಿ ಬುದ್ದಿಶಾಲಿನಿಯಂತೆ ನಡೆದುಕೊಳ್ಳುವುದಕ್ಕೆ, ನಿನಗೆ ಈ ವೊಂದು ದಿನ ವಾಯಿದೆಯನ್ನು ಕೊಟ್ಟಿರುತ್ತೇನೆ. ನಾಳೆ ಬೆಳಗ್ಗೆ ಬರುತ್ತೇನೆ. ಅಷ್ಟರೊಳಗಾಗಿ ಈ ಮೌರ್ಖ್ಯವನ್ನು ಬಿಟ್ಟು ನನ್ನ ಹೆಂಡತಿಯಾಗಿರುವುದಕ್ಕೆ ಒಪ್ಪಿಕೊಂಡರೆ ಸರಿ; ಹಾಗಿಲ್ಲದ ಪಕ್ಷದಲ್ಲಿ, ನಿನ್ನ ಎದುರಿಗೆ ನಿನ್ನ ತಂದೆಯನ್ನು ವಧಿಸುತ್ತೇನೆ. ಅನಂತರ ನಿನ್ನ ಪಾತಿವ್ರತ್ಯಕ್ಕೆ ಭಂಗವನ್ನು ಮಾಡಿ, ತರುವಾಯ ನಿನ್ನನ್ನೂ ಯಮಪುರಿಗೆ ಕಳುಹಿಸುತ್ತೇನೆ.
  ಶಂಬರನು ಹೀಗೆಂದು ಹೇಳಿ, ಆ ಕೊಟಡಿಯನ್ನು ಬಿಟ್ಟು ಹೊರಟನು, ಕಾಮಮೋಹಿನಿಯು ಅವನಿಗೆ ಕೇಳುವಂತಯೇ “ ದುರಾತ್ಮರಾದವರು ಒಂದು ವಿಧವಾಗಿ ಯೋಚಿಸಿದರೆ ದೇವರು ಮತ್ತೊಂದು ವಿಧವಾಗಿ ಯೋಚಿಸ ಕೂಡದೇ? ಈ ಪ್ರಪಂಚದಲ್ಲಿ ದುಷ್ಟನಿಗ್ರಹ ಶಿಷ್ಟ ಪರಿಪಾಲನೆಗಳನ್ನು ದೇವರು ವಹಿಸಿರುವನೋ ಇಲ್ಲವೋ ಅದು ನಾಳೆ ಬೆಳಗ್ಗೆ ಗೊತ್ತಾಗುವುದು ” ಎಂದು ಹೇಳಿ, ಆತ್ಮಗತವಾಗಿ “ ಈಶ್ವರನು ಈ ಯಿಪ್ಪತ್ತನಾಲ್ಕು ಘಂಟೆಗಳೊಳಗಾಗಿ ಇವನಿಗೆ ಶಿಕ್ಷೆಯನ್ನು ಮಾಡದಿದ್ದರೆ, ಹೇಗಾದರೂ ನಾನು ಆತ್ಮಹತ್ಯವನ್ನಾದರೂ ಮಾಡಿಕೊಂಡು ನನ್ನ ಪಾತಿವ್ರತ್ಯಕ್ಕೆ ಭಂಗ ಬರದಂತೆ ಮಾಡಿಕೊಳ್ಳಬೇಕು ” ಎಂದು ಪರ್ಯಾಲೋಚಿಸುತ್ತಿದ್ದಳು.

♠♠ ♠♠