ಪುಟ:ಪರಂತಪ ವಿಜಯ ೨.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮

ಪರಂತಪ ವಿಜಯ



ಯಲ್ಲಿ ಆಶೆ ತೊಲಗಿದಕಾರಣ, ನಾನು ಅವುಗಳನ್ನು ರೂಢಿಸುವುದಕ್ಕೂ ಪ್ರಯತ್ನ ಮಾಡಲಿಲ್ಲ. ಆ ಕಾಮಮೋಹಿನಿಗೆ ನನ್ನಲ್ಲಿ ಉಂಟಾದ ಅನುರಾಗವೇ, ನನಗೆ ಈ ಪ್ರಕಾರವಾಗಿ ಪ್ರಾಣದಮೇಲೂ ಐಶ್ವರ್ಯದಮೇಲೂ ಜುಗುಪ್ಸೆಯನ್ನುಂಟುಮಾಡಿರುವುದು. ಹೀಗಿರುವಲ್ಲಿ, ಇನ್ನು ಹೇಗೆತಾನೆ ನಾನು ಬದುಕಿರಲಿ?-ಹೇಳು.
ಪರಂತಪ- ಅಯ್ಯಾ ! ನೀನು ಹೇಳುವುದು ಸರ್ವಥಾ ಯುಕ್ತ ವಲ್ಲ. ನೀನು ನನಗಿಂತಲೂ ಹಿರಿಯವನು ; ಮತ್ತು ಪಿತೃಪ್ರಾಯನು. ಆದರೂ “ಯುಕ್ತಿಯುಕ್ತಂ ವಟೋ ಗ್ರಾಹ್ಯಂ ಬಾಲಾದಪಿ ಶುಕಾರಪಿ ” ಎಂಬ ನೀತಿಯು ನಿನಗೆ ತಿಳಿಯದ ಅಂಶವಲ್ಲವಾದುದರಿಂದ, ನಾನು ಧೈಯ್ಯದಿಂದ ನಿನಗೆ ವಿಜ್ಞಾವಿಸಿಕೊಳ್ಳುತ್ತೇನೆ. ಸ್ತ್ರೀ ಮಾತ್ರಕ್ಕೋಸ್ಕರ, ಕುಬೇರನ ಐಶ್ವರ್ಯಕ್ಕೆ ಸಮಾನವಾದ ಐಶ್ವರ್ಯವನ್ನೂ, ಇಹಪರಗಳಿಗೆ ಸಾಧಕವಾದ ದೇಹವನ್ನೂ ಕಳೆದುಕೊಳ್ಳುತ್ತೇನೆಂದು ನಿಷ್ಕರ್ಷಿಸಿರುವುದು ಯುಕ್ತವಲ್ಲ. ಸಾಕು, ಬಿಡು. ದ್ರವ್ಯವುಳ್ಳವರಿಗೆ ಯಾವುದು ತಾನೆ ಅಸಾಧ್ಯ ? ನೀನು ಮೋಹಿಸಿರುವ ಸ್ತ್ರೀಗೆ ಸಮಾನರಾದ ಸ್ತ್ರೀಯರು ಲೋಕದಲ್ಲಿ ಯಾರೂ ಇಲ್ಲವೆಂದು ನೀನು ಎಣಿಸಿರುವುದು ನಿನ್ನ ಅಜ್ಞಾನದ ಫಲವೇ ಹೊರತು ಮತ್ತೆ ಬೇರೆಯಲ್ಲ. ಈ ಚಿಂತೆಯನ್ನು ಬಿಡು. ಸಾಧ್ಯವಾದರೆ ನನ್ನ ಶಕ್ತಿಯಿಂದ ಆ ಸ್ತ್ರೀಗೆ ಪುನ: ನಿನ್ನಲ್ಲಿ ಅನುರಾಗವುಂಟಾಗುವಂತೆ ಮಾಡುವೆನು ; ತಪ್ಪಿದರೆ, ಅವಳಿಗಿಂತಲೂ ಉತ್ಕೃಷ್ಟರಾದ ಅನೇಕ ಸ್ತ್ರೀಯರುಗಳನ್ನು ಕರೆತರುವೆನು. ಅವರಲ್ಲಿ ನಿನಗೆ ಇಷ್ಟಳಾದವಳನ್ನು ವರಿಸಿ ಸುಖವಾಗಿ ಬದುಕಬಹುದು. ಇನ್ನು ಈ ವ್ಯಸನವನ್ನು ಬಿಡು.
ಮಾಧವ-ಅಯ್ಯಾ ! ಪರಂತಪ ! ನಿನ್ನೊಡನೆ ಸಂಭಾಷಣೆ ಮಾಡಿದ ಹಾಗೆಲ್ಲ ನಿನ್ನಲ್ಲಿ ನನಗೆ ವಿಶ್ವಾಸವು ಹೆಚ್ಚುತಿರುವುದು. ಆದರೆ, ಈ ಪ್ರಪಂಚದಲ್ಲಿ ನನ್ನ ಅನುರಾಗಕ್ಕೆ ಪೂರ್ಣಪಾತ್ರಳಾದವಳು ಆ ಕಾಮಮೋಹಿನಿಯೊಬ್ಬಳೇ. ಅವಳಿಗೆ ನನ್ನಲ್ಲಿ ಅನುರಾಗವುಂಟಾಗುವಂತೆ ಮಾಡಿದರೆ, ಅದಕ್ಕಿಂತ ಹೆಚ್ಚಾದ ಉಪಕಾರವಾವುದೂ ಇಲ್ಲ. ಈ ವುಪಕಾರವನ್ನು ನೀನು ಮಾಡಿದರೆ, ನನ್ನನ್ನೂ ನನ್ನ ಸಂಪತ್ತನ್ನೂ ನಿನಗೆ ಅಧೀನವನ್ನಾಗಿ ಮಾಡುವೆನು. ಅದು ಹಾಗಿರಲಿ; ಸಾಯಂಕಾಲವಾಗುತ ಬಂದಿತು. ಈ ದಿನ