ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

98

ಕನಸು



ಗಂಡ ಇನ್ನೂ ಹೊರಡದೇ ಇದ್ದುದನ್ನು ಕಂಡು ಸುನಂದೆಗೆ ಆಶ್ಚರ್ಯವಾಯಿತು.
ಆಸೆ ಮತ್ತೊಮ್ಮೆ ಚಿಗುರಿಕೊಂಡು ಆಕೆ ಬಾಗಿಲಿನತ್ತ ಬಂದಳು.
ಸುನಂದೆಯನ್ನು ನೋಡಿದೊಡನೆಯೇ ಪುಟ್ಟಣ್ಣ ಹೊರಡಲೆಂದು ಚಪ್ಪಲಿ
ಹಾಕಿದ.
ಮತ್ತೊಮ್ಮೆ ನಿರಾಸೆ ಆ ಹೆಣ್ಣು ಜೀವಕ್ಕೆ. ಆದರೂ ಆ ಗಂಡಸಿನ ಮನಸ್ಸಿ
ನೊಳಗೆ ಹೊಯ್ದಾಟವಾಗುತ್ತಿದೆ ಎಂದು ಆಕೆ ಊಹಿಸಿದಳು.
ಪುಟ್ಟಣ್ಣ ಬಾಗಿಲು ಸಮೀಪಿಸಿದಾಗ ಆಕೆಯೆಂದಳು:
"ಇಲ್ನೋಡಿ—".
ಗಂಡ ತಡೆದು ನಿಂತ. ಕಣ್ಣಿನ ಕೊನೆಯಿಂದೊಮ್ಮೆ ಹೆಂಡತಿಯನ್ನು ನೋಡಿದ.
"ಏನು?"
ಸ್ವರ ಒರಟಾಗಿತ್ತು ಎಂದಿನಂತೆ. ಆದರೆ ಎಂದಿನಂತೆ ಸ್ಥಿರವಾಗಿರಲಿಲ್ಲ.
ಸುನಂದಾ ಮಾತನಾಡಿದ್ದಳು. ಉತ್ತರವಾಗಿ-ಏನು, ಎಂಬ ಪ್ರಶ್ನೆಯೂ
ಬಂದಿತ್ತು. ಆದರೆ ಮುಂದೇನು ಹೇಳಬೇಕೆಂಬುದೇ ತೋಚಲಿಲ್ಲ.
ಆ ಮನಸ್ಸು ಗೋಳಾಡಿತು: ಯಾಕೆ ಮಾತಾಡಿದೆ? ಯಾಕೆ ತಡೆದು ನಿಲ್ಲಿಸಿದೆ?
ಈಗ ಹೇಳಬೇಕಾದ್ದೇನನ್ನು?
"ಇವತ್ತು ಬೇಗ್ನೆ ಮನೆಗೆ ಬರ್ತೀರಾ?"
ಮೆದುಳು ಮಾತನಾಡಿತ್ತೋ ಹೃದಯ ಮಾತನಾಡಿತ್ತೋ ಸ್ಪಷ್ಟವಾಗಿರಲಿಲ್ಲ.
ಅಂತೂ ಆ ಪ್ರಶ್ನೆಯನ್ನು ಆಕೆ ಕೇಳಿಬಿಟ್ಟಿದ್ದಳು. ಕೇಳಿದ ಮೇಲೆ ಭಯವಾಯಿತು.
ತನ್ನ ಭವಿಷ್ಯತ್ತೆಲ್ಲ ಆತ ಕೊಡುವ ಉತ್ತರವನ್ನೇ ಅವಲಂಬಿಸಿದೆಯೇನೋ ಎನ್ನುವಂತೆ
ಆಕೆ, ಆತ ಬಾಯಿ ತೆರೆಯುವುದನ್ನೇ ಈಕ್ಷಿಸಿದಳು.
"ಯಾಕೆ?"
ಒಂದೇ ಪದ. ಒಂದೇ ಪ್ರಶ್ನೆ.
ಗಂಡ ಉತ್ತರವನ್ನು ನಿರೀಕ್ಷಿಸಿದ್ದ. ಬೇಗನೆ ಬರುವಿರಾ-ಎಂದು ಆಕೆ ಯಾಕೆ
ಕೇಳಿದ್ದಳು?
"ಸುಮ್ನೆ ಕೇಳ್ದೆ."
ಅದು ಕ್ಷೀಣ ಸ್ವರದಿಂದ ಕೊಟ್ಟ ಉತ್ತರ.
ಪುಟ್ಟಣ್ಣ ಮಾತನಾಡದೆ ಹೊರಟು ಹೋದ.
ಸುನಂದೆಗೆ ಅಳು ಬರುವಂತಾಗಿ, ತನಗೆ ಹುಚ್ಚು, ತನಗೆ ಬುದ್ಧಿ ಇಲ್ಲ-ಎಂದು
ತನ್ನನ್ನೇ ಜರೆದುಕೊಂಡಳು.
...ಮೆಲ್ಲನೆ ಹೊತ್ತುಕಳೆಯಿತು. ಮೃದುವಾಗಿ ಹಾಲನ್ನ ಕಲಸಿ ಮಗುವಿಗಷ್ಟು
ಉಣಿಸಿದಳು...ಮಗು ನಿದ್ದೆ ಹೋಯಿತು...ಬೀದಿಯ ಕಡೆ ಹೋದರೆ ರಾಧಮ್ಮ
ಸಿಗುವರು. ಮತ್ತೆ ಗಂಡನನ್ನು ತಾನು ಒಲಿಸಿಕೊಂಡಿರುವೆನೆಂದೇ ನಂಬಿ, ಆಕೆ