ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

99

ಮುಗುಳು ನಗುವರು. ಆ ಯೋಚನೆ ಕ್ರೂರವಾಗಿತ್ತು. ಅದಕ್ಕೋಸ್ಕರ ಸುನಂದಾ
ಅತ್ತ ಹೋಗಲಿಲ್ಲ. ಪುಟ್ಟಣ್ಣ ಹೋದಾಗ ತೆರೆದಿದ್ದ ಬಾಗಿಲನ್ನು ಹಾಗೆಯೇ ಇರ
ಗೊಟ್ಟು, ಆಕೆ ಮನೆಯೊಳಗೆ ಗೊತ್ತು ಗುರಿ ಇಲ್ಲದೆ ನಡೆದಳು...ಉಟ್ಟುದನ್ನು ಬದ
ಲಿಸಿ, ಕೊಳಕಾದುದನ್ನೆ ಉಡಬೇಕು; ತಲೆಕೂದಲು ಕೆದರಿಕೊಂಡು ಹಾಸಿಗೆಯಮೇಲೆ
ಉರುಳಿಕೊಳ್ಳಬೇಕು-ಎಂದೆಲ್ಲ ಆಕೆಗೆ ಮನಸಾಯಿತು. ಆದರೆ ಹಾಗೆ ಮಾಡಲಿಲ್ಲ.
ಕತ್ತಲು...ದೀಪಗಳು...
ಸುನಂದಾ ಕೊಠಡಿಗೆ ಹೋಗಿ, ಬಹಳ ಕಾಲದ ಬಳಿಕ ಪುಟ್ಟಣ್ಣನ ಬಟ್ಟೆ ಬರೆ
ಗಳನ್ನು ಆಸೆಯಿಂದ ಮುಟ್ಟಿದಳು. ಅಲ್ಲಿದ್ದ ಒಂದೊಂದು ವಸ್ತುವನ್ನೂ ದಿಟ್ಟಿಸಿ
ದಿಟ್ಟಿಸಿ ನೋಡಿ ಮಂಚದ ಮೇಲೆ ಕುಳಿತಳು. ಹಾಗೆಯೇ ಆ ಹಾಸಿಗೆಯ ಮೇಲೆ
ಒರಗಿಕೊಂಡಳು...
ಒಂದು ದಿನ-ಎಷ್ಟೋ ಯುಗಗಳಿಗೆ ಹಿಂದೆ-ಪುಟ್ಟಣ್ಣ ಕೇಳಿದ್ದ:
“ನಿನಗೂ ಒಂದು ಮಂಚ ಬೇಕಾ?”
ಆ ಪ್ರಶ್ನೆ ಬಂದಾಗ ಸುನಂದೆ ಆತನ ತೋಳ ತೆಕ್ಕೆಯಲ್ಲಿದ್ದಳು. ಆಗ ಆಕೆ ಕೊಟ್ಟ
ಉತ್ತರ:
“ಬೇಡಿ, ಇದೊಂದೇ ಸಾಕು.”
ಅದೊಂದೇ ಉಳಿದಿತ್ತು ಈಗಲೂ.
ಆ ತಲೆದಿಂಬಿಗೆ ಮುಖ ಸೋಂಕಿದಾಗ ಎದೆ ಕುದಿಯಿತು. ಬಿಸಿಯಾದುದೇನೋ
ದೇಹವನ್ನು ಬಿಟ್ಟು ಹೋಗಿ, ಒಂದು ಕ್ಷಣ ಚಳಿಯಾದಂತಾಯಿತು. ಮತ್ತೆ ಮೈ ಬಿಸಿ
ಯಾಗಿ, ಬಯಕೆಗಳು ಬಾಯ್ಬಿಟ್ಟುವು.
ಹೊಡೆತದ ಹಿಂಸೆಯ ಎರಡು ರಾತ್ರೆಗಳು...ಅತ್ಯಂತ ಕ್ರೂರವಾದ ಆ ನೆನಪು
ಗಳು ಆಕೆಗೆ ಮರೆತುಹೋಗಿರಲಿಲ್ಲ.
ಆದರೂ ಮೇಲಕ್ಕೆ ಮುಖಮಾಡಿ ತಾರಸಿ ಛಾವಣಿ ನೋಡುತ್ತ ಮಲಗಿ
ಕೊಂಡಾಗ, ಕಳೆದ ಯುಗದ ರಸ ನಿಮಿಷಗಳ ಸವಿನೆನಪನ್ನೆ ಆಕೆ ಮತ್ತೆ ಮತ್ತೆ ಸವಿದಳು.
....ಹೊರಗೆ ಸದ್ದಾಯಿತು. ಗಂಡನ ನಡಿಗೆಯ ಸಪ್ಪಳ. ಬಾಗಿಲು ಮುಚ್ಚಿ
ಅಗಣಿ ಹಾಕಿದ ಸದ್ದು. ಮತ್ತೆ ಕೊಠಡಿಯತ್ತ ನಡಿಗೆ....
ಎವೆ ಮುಚ್ಚಿ ತೆರೆಯುವುದರೊಳಗೆ ಸುನಂದಾ ಅಂಗೈಗಳನ್ನು ತಲೆಯ ಕೆಳಗಿರಿಸಿ,
ಮೈಚಾಚಿ ಮಲಗಿದಳು. ನಿದ್ದೆ ಬಂದವರಂತೆ ನಟಿಸುತ್ತ ಕಣ್ಣು ಮುಚ್ಚಿಕೊಂಡಳು.
ಪುಟ್ಟಣ್ಣ ಆಕೆಯ ಮೇಲಿನಿಂದ ದೃಷ್ಟಿ ಕೀಳಲಾರದೆ ಹಾಗೆಯೇ ನಿಂತ.
—ಇವತ್ತು ಬೇಗ್ನೆ ಮನೆಗೆ ಬರ್ತೀರಾ?
—ಯಾಕೆ?
....ತನ್ನನ್ನು ಮೀರಿಸಿದಂತೆ ತೋರಿದ ಶಕ್ತಿಗೆ ಅಧೀನನಾಗಿ ಪುಟ್ಟಣ್ಣ ಚಲಿಸಿದ.