ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

105



"ಅವರು ಆಫೀಸ್ನಲ್ಲಿಲ್ವಂತೆ ಕಣ್ರೀ..."
ಗಂಡನನ್ನು ಒಲಿಸಿಕೊಳ್ಳುವ ವಿಷಯದಲ್ಲಿ ಸುನಂದಾ ಭಾಗ್ಯಶಾಲಿಯಾಗಲಿಲ್ಲ
ಎಂದು ರಾಧಮ್ಮನಿಗೆ ತೋರಿತು. 'ಪಾಪ!' ಎಂದು ನಿಟ್ಟುಸಿರು ಬಿಟ್ಟು ಅವರು
ಮನೆಗೆ ಮರಳಿದರು.
ಹೀಗೆ, ಹಿಂದಿನ ದಿನದ ಘಟನೆ ವೈಯಕ್ತಿಕ ಪ್ರಕರಣವಾಗಿ ಸುನಂದೆಯೊಬ್ಬ
ಳಲ್ಲೇ ಉಳಿಯಿತು. ಆ ಅನುಭವವೂ ಅವಮಾನವೂ ಆ ವಿಜಯವೂ ಸೋಲೂ ಆಕೆ
ಯೊಬ್ಬಳಲ್ಲೇ ಉಳಿದ ರಹಸ್ಯವಾಯಿತು.
ಸಂಜೆಯಾದಾಗ, ತನಗೆ ಹಸಿವಿಲ್ಲದೇ ಇದ್ದರೂ ಗಂಡನಿಗೋಸ್ಕರ ಸುನಂದಾ
ಒಂದಿಷ್ಟು ಅಡುಗೆ ಮಾಡಿದಳು.
ಅಭ್ಯಾಸ బలದಿಂದ ಆಕೆಯ ಕಾಲುಗಳು ಬಾಗಿಲ ಬಳಿ ಹೋದಾಗ, ಕುಸು
ಮಳೂ ಆಕೆಯ ಗಂಡನು ಸಂಜೆಯ ವಾಯು ವಿಹಾರ ಮುಗಿಸಿ ಹಿಂತಿರುಗುತ್ತಿದ್ದು
ದನ್ನು ಸುನಂದಾ ಕಂಡಳು. ಆ ದಂಪತಿ ಬೀದಿಯುದ್ದಕ್ಕೂ ಗಟ್ಟಿಯಾಗಿ ನಗುತ್ತ
ಮಾತನಾಡುತ್ತ ಬರುತ್ತಿರಲ್ಲಿಲ್ಲ. ಹಸನ್ಮುಖಿಗಳಾಗಿದ್ದರೂ ಅವರ ನಡಿಗೆಯಲ್ಲಿ
ಗಾಂಭೀರ್ಯವಿತ್ತು. ಅವರಿಬ್ಬರ ನಡುವೆ, ಮಾತಿಲ್ಲದೆಯೇ ಪರಸ್ಪರ ತಿಳಿವಳಿಕೆ ನೀಡು
ತ್ತಿದ್ದ ಮೌನ ನೆಲೆಸಿತ್ತು.
ಮರೆಯಾಗಿ ನಿಂತು ಅವರನ್ನು ಕಣ್ಣು ತುಂಬ ನೋಡಿ, ತನ್ನೊಳಗಿನ ನೋವೂ
ಹಚ್ಚ ಹಸುರಾಗಿಯೇ ಇದೆ ಎಂಬುದನ್ನು ಮನಗಂಡು, ಸುನಂದಾ ಒಳಕ್ಕೆ ಬಂದಲು.
ಹಗಲು ಮುಗಿದು ಮತ್ತೆ ಕತ್ತಲು...
ನಿನ್ನೆ ಇಷ್ಟು ಹೊತ್ತಿಗೆ-
ಆಕೆ ಬಲು ನಿಧಾನವಾಗಿ ತನ್ನ ಹಾಸಿಗೆ ಹಾಸಿದಳು.
ಅಷ್ಟರಲ್ಲೆ-

****

ಪಕ್ಕದಲ್ಲಿದ್ದ ಖಾಲಿ ನಿವೇಶನದ ಗುಡಿಸಲಿನಿಂದ, ದೀರ್ಘವಾಗಿ ಅಳುವ ಸ್ವರ
ಕೇಳಿಸಿತು. ಪರಿಚಿತವಾದ ಹೆಣ್ಣು ಧ್ವನಿ. ಅದು ಕೂಗಳತೆಯ ದೂರಕ್ಕೆಲ್ಲ ಕೇಳಿಸು
ವಂತಹ ರೋದನ.
ಆತ ಕುಡಿದ-ತೊದಲುತ್ತಿದ್ದ-ಧ್ವನಿಯಲ್ಲಿ ರೇಗಾಡುತ್ತಿದ್ದ:
"ಮುಂಡೆ! ನನಗ್ಗೊತ್ತು, ಯಾರನ್ನೋ ಮಡಿಕ್ಕೊಂಡಿದೀಯಾ."
"ಈ ಸೈತಾನ ನನ್ನ ಹೊಡೆದು ಕೊಲ್ತಾನಪ್ಪೋ ಕೊಲ್ತಾನೆ!"
"ಅವನು ಯಾರು? ನಿಜ ಹೇಳು. ಇಬ್ಬರನ್ನೂ ಒಟ್ಟಿಗೇ ಖೂನಿ ಮಾಡ್ತೀನಿ."
ಆಗ ಆಕೆಯ ಉತ್ತರದಲ್ಲಿ ಬೆದರಿಕೆಯನ್ನು ಇದಿರಿಸುವ ಲಕ್ಷಣ ಕಂಡಿತು:
"ಬಹಳ ನೋಡಿದೀನಿ ಖೂನಿ ಮಾಡೋರ್ನ್ನ! ಗೂಬೆ! ಸಂಪಾದಿಸಿದ್ದನೆಲ್ಲ

14