ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



8

ಕನಸು

ಪತ್ರಿಕೆ...ರೇಡಿಯೋ...ಕಲೆಯ ಅಭಿರುಚಿ...
ಇಲ್ಲ, ಅದೊಂದೂ ಸಾಧ್ಯವಾಗಿರಲಿಲ್ಲ. ಕೈ ಹಿಡಿದವನಿಗೆ ಅಂಥದರಲ್ಲಿ ಆಸಕ್ತಿ
ಇರಲಿಲ್ಲ.

****

ಮಗು ಎದ್ದು ತಾಯಿಯ ನಿದ್ದೆಗೆ ಭಂಗ ತಂದಿತು. ಸುನಂದಾ ಸರಸ್ವತಿಯನ್ನು
ರಮಿಸುತ್ತಾ ಅತ್ತಿತ್ತ ನಡೆದಳು.
ಆಗ ಪಕ್ಕದ ಮನೆಯ ರಾಧಮ್ಮ ಬಂದರು.
“ಆಯ್ತೆ ಊಟ?”
ಎಷ್ಟು ಹೊತ್ತಾದರೂ ಕೇಳಲೇ ಬೇಕಾದ ಮಾಮೂಲಿನ ಪ್ರಶ್ನೆ.
“ಹೂಂ ಕಣ್ರಿ.”
ಅಂತಹ ಚುಟುಕು ಉತ್ತರದಿಂದೆಲ್ಲ ತೃಪ್ತಿಯಾಗುವವರಲ್ಲ ರಾಧಮ್ಮ. ಸುನಂದಾ,
ತನ್ನೊಳಗಿನ ಬೇಗುದಿಯನ್ನು ಬಚ್ಚಿಡಲು ಬಯಸುತ್ತ ಮತ್ತೊಮ್ಮೆ ನಗೆಯ ಮುಖ
ವಾಡ ಧರಿಸಿದಳು.
ಆದರೆ ರಾಧಮ್ಮನದು ತೀಕ್ಷ್ಣ ದೃಷ್ಟಿ.
“ಇದೇನ್ರೀ ಹೀಗಿದೀರಾ? ಮೈಲಿ ಹುಷಾರಿಲ್ವೆ?”
“ಚೆನ್ನಾಗೇ ಇದೀನಿ ರಾಧಮ್ನೋರೆ.”
“ಅದೇನೋಪ್ಪ, ಮನಸ್ಸು ಬಿಟ್ಟು ಮಾತಾಡೋಲ್ಲ ನೀವು. ಆ ನಿಮ್ಮ
ಯಜಮಾನರೋ, ನಿಮಗೆ ಸರಿಯಾದ ಜೋಡಿ....ಅದ್ಯಾಕೋ ಈ ನಡುವೆ ಸ್ವಲ್ಪ
ವಿಚಿತ್ರವಾಗಿದಾರಪ್ಪಾ-ಗುಂ ಅಂತಿರ್ತಾರೆ.”
....ಸರಿಯಾದ ಜೋಡಿ! ವಿಚಿತ್ರವಾಗಿದಾರೆ!...
ಒಮ್ಮೆಲೆ ಹೃದಯ ಬಿರಿದು ಒಳಗಿರುವುದೆಲ್ಲ ಹರಿದು ಹೋಗುವುದೇನೋ
ಎಂದು ಸುನಂದೆಗೆ ಭಯವಾಯಿತು. ಆದರೂ ಆಕೆ ಧೈರ್ಯಗೆಡದೆ, ತನ್ನ ಕೊರಗನ್ನು
ಒಳಗೇ ಹತ್ತಿಕ್ಕಿ, ಅದಕ್ಕೆ ಮೌನದ ಕವಚ ತೊಡಿಸಿದಳು.
ಅನಂತರ ಮಾತು—ಒಂದಕ್ಕೊಂದು ಸಂಬಂಧವಿಲ್ಲದ ಮಾತು.

****

ಮನೆ ಬಾಡಿಗೆ ಕೊಟ್ಟಿರಲಿಲ್ಲ. ಜಿನಸಿನ ಅಂಗಡಿಗೂ....ಸಂದಾಯವಾಗದೆ ಇದ್ದ
ಇನ್ನೊಂದು ದೊಡ್ಡ ಬಿಲ್ಲು ಡಾಕ್ಟರದು....
... ಮತ್ತೆ ಸುನಂದಾ ಮಗುವನ್ನೆತ್ತಿಕೊಂಡು ಬೀದಿಗೆ ನಿಂತಳು.
ಮೊದಲಾದರೆ ಗಂಡ ನಿರ್ದಿಷ್ಟ ಹೊತ್ತಿಗೆ ಮನೆಗೆ ಬರುತ್ತಿದ್ದ.
ತಾನು ಒಳಗಿದ್ದಾಗ ಆತ, ಮೆಲ್ಲನೆ ತಟ್ಟಿ ಹೇಳುತ್ತಿದ್ದ “ಬಾಗಿಲು!” ಎಂಬ
ಮೃದು ಧ್ವನಿ, ಮೋಹಕವಾಗಿತ್ತು.
ಈಗ ಆ ಪದ ಅದೆಷ್ಟು ಕರ್ಕಶ!