ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

110

ಕನಸು



ಅಂತೀರೋ?"
"ಹಾಗೇ ಮಾಡಿ."
...ಊಟ ಮುಗಿದು, ಮಧ್ಯಾಹ್ನದ ಅನಂತರ ಸುನಂದಾ ಹಾಯಾಗಿ ಕುಳಿತು,
'ಮುಂದೇನಿನ್ನು?' ಎಂದು ಯೋಚಿಸುತ್ತಿದ್ದಾಗ, ರಟ್ಟಿನದೊಂದು ಪೆಟ್ಟಿಗೆ ಹೊತ್ತು
ಕೊಂಡು ಕುಸುಮಾ ಬಂದಳು. ಸುನಂದೆಗೆ ಸಂತೋಷವಾದರೂ ಸಂಕೋಚವೆನಿಸಿತು.
"ಯಾಕೆ ಬಂದೇಂತ ಕೇಳ್ಬೇಡಿ ಇನ್ನು. ಎಂಥವರ್ರೀ ನೀವು? ಮಗುವಿನ
ಹುಟ್ಟಿದ ಹಬ್ಬ ಅಂತ ಹೇಳೋದು ಬೇಡ್ವೆ? ಆವತ್ತೊಮ್ಮೆ ಕೇಳಿದಾಗ ಉತ್ತರ
ಕೊಡದೆ ಮಾತು ಹಾರಿಸಿಬಿಟ್ರಿ. ರಾಧಮ್ಮ ಹೇಳದ್ದರಿಂದ ತಿಳೀತು. ಅಬ್ಬ ನೀವೇ!...."
"ಈ ಹುಟ್ಟಿದ ಹಬ್ಬವೆಲ್ಲ ಏನು ಮಹಾ?"
_ಎನ್ನುತ್ತಾ ಸುನಂದಾ ಕೊಠಡಿಯಿಂದ ಕುರ್ಚಿ ತಂದು ಕುಸುಮಳಿಗಾಗಿ ಹೊರ
ಗಿಟ್ಟಳು.
ಕುಸುಮಾ ಮಗುವನ್ನೆತ್ತಿಕೊಂಡು ಮುದ್ದಿಟ್ಟಳು. ತಾನು ತಂದಿದ್ದ ಪೆಟ್ಟಿಗೆ
ತೆರೆದು ಅದರೊಳಗೆ ಹೇರಳವಾಗಿದ್ದ ಆಟದ ಸಾಮಾನುಗಳನ್ನೆಲ್ಲ ಒಂದೊಂದಾಗಿ
ಹೊರಕ್ಕೆ ತೆಗೆದಳು. ಆ ವಿಚಿತ್ರ ಲೋಕದಲ್ಲಿ ಮಗು ಮೈ ಮರೆಯಿತು.
"ಇ‍ಷ್ಟೆಲ್ಲಾ ಯಾಕೆ ತಂದಿರಿ?"
_ಎಂಬ ಮಾತು ಸುನಂದೆಯ ಕಂಠದಿಂದ ಹೊರಬಿತ್ತು.
ಕುಸುಮಾ ಕೋಪಗೊಂಡವಳಂತೆ ನಟಿಸಿ ಅಂದಳು:
"ಇದು ನಿಮಗಲ್ಲ ಕಣ್ರೀ, ಮಗೂಗೆ."
ಹಾಗೆ ಎರಡು ನಿಮಿಷಗಳಿದ್ದು, "ಕಾಫಿ ಮಾಡ್ತೀನಿ, ಇರಿ" ಎಂದು ಸುನಂದಾ
ಹೇಳಿದರೂ ಕೇಳದೆ, "ಸರಸ್ವತೀ ಕೃಪೆಯಿಂದ ನಿಮ್ಮ ಮನೆಯೊಳಗೆ ಬರೋ ಭಾಗ್ಯ
ಲಭಿಸಿತು" ಎಂದು ನಕ್ಕು, ಕುಸುಮಾ ಹೊರಟಳು.
ಹೋಗುತ್ತ, ಸುನಂದೆಯ ಮನಸ್ಸು ಶ್ರೀಮಂತವಾಗಿದ್ದರೂ ಮನೆ ಎಷ್ಟೊಂದು
ಬರಡಾಗಿತ್ತೆಂಬುದನ್ನು ಕುಸುಮಾ ಗಮನಿಸದೆ ಇರಲಿಲ್ಲ.
...ಸಂಜೆ ಶ್ಯಾಮ ಬಂದು ಕರ್ಪೂರದ ಕೂಸೊಂದನ್ನು ಸರಸ್ವತಿಯ ಮುಂದಿಟ್ಟ.
“ಎತ್ತಿ ಕುಕ್ಬೇಡ. ಜಜ್ಜಿ ಹೋಗುತ್ತೆ. ಪಾಪಂಗೆ ನೋವಾಗುತ್ತೆ"
_ಎಂದು ಹಿತೋಪದೇಶ ಮಾಡಿದ.
ಅಷ್ಟರಲ್ಲೇ, ಗುಡಿಸಲಿನ ಹೆಂಗಸು ಯಾರನ್ನೋ ಶಪಿಸುತ್ತ ತನ್ನಷ್ಟಕ್ಕೇ ಗೊಣ
ಗುತ್ತ ಅಳುತ್ತಿದ್ದುದು ಕೇಳಿಸಿತು. ಅದೇನೆಂದು ವಿಚಾರಿಸಲು ರಾಧಮ್ಮ ಆಕೆಯನ್ನು
ತಮ್ಮ ಅಂಗಳಕ್ಕೆ ಕರೆದರು.
ಆ ಹೆಂಗಸು ಗೋಳಾಡಿದಳು. ಆಕೆಯ ದೊಡ್ಡಮಗ ಮೂರು ದಿನಗಳಿಂದ
ಮನೆಗೇ ಬಂದಿರಲಿಲ್ಲವಂತೆ. ಮಧ್ಯಾಹ್ನವೆಲ್ಲ ರೈಲ್ವೆ ನಿಲ್ದಾಣದ ಬಳಿಗೆ ಹೋಗಿ
ಹುಡುಕಿದಳಂತೆ. ಅಲ್ಲೆಲ್ಲಿಯೂ ಆತ ಇರಲಿಲ್ಲವಂತೆ.