ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

111

"ಏನಾಯ್ತೋ ನನ್ನ ಮಗನಿಗೇ...?"
"ಯಾಕೆ ಅಳ್ತೀಯಾ ಅದಕ್ಕೆಲ್ಲ? ಬರ್ತಾನೆ, ಬಿಡು..."
"ಇಲ್ಲಮ್ಮಾ. ಅವನು ಯಾವುದೋ ರೈಲು ಹತ್ತಿ ಹೊರಟ್ಬಿಟ್ಟಿದ್ದಾನೆ. ಈ
ಊರು ಬಿಟ್ಟು ಹೋಗ್ತಿನೀಂತ ಅವತ್ತೇ ಹೇಳ್ತಿದ್ದ..."
ಬಾಗಿಲಲ್ಲಿ ನಿಂತು ಆ ಸಂಭಾಷಣೆಯನ್ನು ಕೇಳಿದ ಸುನಂದಾ ಒಳ ಹೋಗಿ,
ತಾನು ತಯಾರಿಸಿದ್ದ ಒಂದಷ್ಟು ತಿಂಡಿಯನ್ನು ಕಾಗದದಲ್ಲಿ ಕಟ್ಟಿ, ಹೊರಗೆ ತಂದಳು.
"ತಗೋಮ್ಮ ಇದನ್ನ."
ಆ ಹೆಂಗಸು ಅಳು ನಿಲ್ಲಿಸಿ ಎರಡೂ ಕೈ ನೀಡಿದಳು.
ಸಿಂಬಳ ಸುರಿಸುತ್ತಿದ್ದ ಕೊಳಕು ಕೊಳಕಾಗಿದ್ದ ಹೆಣ್ಣು ಮಗು ತಾಯಿಗೆ ಅಂಟಿ
ಕೊಂಡೇ ಬಂದು ಆ ತಿಂಡಿಯತ್ತ ದೃಷ್ಟಿಹರಿಸಿತು.
ಎರಡು ವರ್ಷವಾಗಿತ್ತೇನೋ ಆ ಮಗುವಿಗೆ? ಅದರ ಹುಟ್ಟುಹಬ್ಬ-ಹುಟ್ಟಿದ
ದಿನವಾದರೂ ಆ ತಾಯಿಗೆ ನೆನಪಿದೆಯೋ ಇಲ್ಲವೋ? ನಕ್ಷತ್ರ-ಜಾತಕ....
ಸುನಂದೆಯೊಬ್ಬಳೇ ಬಾಗಿಲಿಗೆ ಅಡ್ಡವಾಗಿ ನಿಂತಳು. ಆ ಬಡವರನ್ನು ತನ್ನ
ಮಗು ನೋಡಬಾರದೆಂದು, ಸರಸ್ವತಿಯನ್ನು ಆಕೆ ಹೊರಕ್ಕೆ ತರಲಿಲ್ಲ.

****

ಬರಿದಾದ ಟಿಫಿನ್ ಕ್ಯಾರಿಯರಿನೊಡನೆ ಊಟದ ಚೀಲವೇನೋ ಹಿಂತಿರುಗಿ
ಬಂತು. ಆದರೆ ಯಾರು ಉಂಡಿದ್ದರೋ? ಮಗಳ ಹುಟ್ಟಿದ ಹಬ್ಬದ ಅಡುಗೆ ಅವರಿಗೆ
ಹಿಡಿಸಿತೋ ಇಲ್ಲವೋ? ಅಥವಾ, ಜವಾನನೇ ಅದನ್ನು ಖಾಲಿಮಾಡಿದನೋ?
....ರಾತ್ರೆ ಬಹಳ ಹೊತ್ತಾಯಿತು. ತಾನೂ ಉಣ್ಣದೆ ಸುನಂದಾ ಗಂಡನಿಗಾಗಿ
ಕಾದಳು...ಬಳಿಕ ಬರಿ ಹೊಟ್ಟೆಯಲ್ಲೇ ನಿದ್ದೆ ಹೋದಳು.
...ಬಹಳ ಹೊತ್ತಾದ ಮೇಲೆ ಬಾಗಿಲ ಸಪ್ಪಳವಾಗಿ ಆಕೆಗೆ ಎಚ್ಚರವಾಯಿತು.
"ಅಮ್ಮಾ" ಎಂದು ಕರೆಯುತ್ತಿತ್ತು ಅಪರಿಚಿತವಾದೊಂದು ಸ್ವರ. ಬಾಗಿಲು ತೆರೆಯ
ಬೇಕೇ ಬೇಡವೇ ಎಂದು ಸುನಂದಾ ಅನುಮಾನಿಸಿದಳು. ಆದರೆ ಮತ್ತೊಮ್ಮೆ "ಅಮ್ಮಾ"
ಎಂದು ಕರೆ ಕೇಳಿದಾಗ, ತನ್ನ ಗಂಡನಿಗೆ ಏನಾದರೂ ಆಗಿದೆಯೇನೋ ಎಂದು ಗಾಬರಿ
ಯಾಗಿ ಆಕೆ ಕದ ತೆರೆದಳು.
ಬೀದಿಯಲ್ಲೊಂದು ಜಟಕಾಗಾಡಿ ನಿಂತಿತ್ತು. ಬಾಗಿಲು ತಟ್ಟಿದವನು ಸುನಂದೆ
ಯನ್ನು ಕಣ್ಣು ತುಂಬ ನೋಡುತ್ತಿದ್ದ.
"ಯಾರು? ಅವರಿನ್ನೂ ಬಂದಿಲ್ಲ."
ಅವನೆಂದ:
"ಬಂದಿದಾರೆ. ಜಟಕಾದಲ್ಲಿದಾರೆ. ನಾವು ಕರಕೊಂಡು ಬಂದಿದೀವಿ."
"ಅಯ್ಯೊ! ಏನಾಯ್ತು?"
"ಏನೂ ಇಲ್ಲ ಗಾಬರಿಯಾಗ್ಬೇಡಿ. ಸ್ವಲ್ಪ ನಿದ್ರೆ ಬಂದಿದೆ, ಅಷ್ಟೆ. ಇಳಿಸ್ಕೊಂಡು