ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

113

೧೮

ತನ್ನ ಒಡವೆ ತನಗೆ ಮರಳಿ ದೊರೆಯಿತೆಂದು ಸ್ವಲ್ಪ ಹೊತ್ತು ಸುನಂದೆ
ಭಾವಿಸಿದ್ದ ರಾತ್ರಿ ಕಳೆದು, ಮೂರು ತಿಂಗಳು ದಾಟಿದುವು. ಇನ್ನೊಂದು ಜೀವದ
ಅಂಶವನ್ನು ತಾನು ಹೊತ್ತಿದ್ದಳೆಂಬುದಕ್ಕೆ ಯಾವ ಚಿಹ್ನೆಯೂ ಸುನಂದೆಗೆ ತೋರಲಿಲ್ಲ.
ಅದರಿಂದ ಆಕೆಗೆ ದುಃಖವೂ ಆಗಲಿಲ್ಲ, ಸಂತೋಷವೂ ಆಗಲಿಲ್ಲ.
ಹಾಗೆ ಕಾಲ ಕಳೆದುದನ್ನು ಪುಟ್ಟಣ್ಣನೂ ಗಮನಿಸಿದ.
ಹೀಗೂ ಆಗುವುದು ಅಸಂಭವವಾಗಿರಲಿಲ್ಲ. ಇನ್ನೊಂದು ಮಗುವಿಗೆ ತಂದೆ
ಯಾಗುವ ಯೋಗ ಸದ್ಯಃ ಇಲ್ಲವೆಂದು ಆತನಿಗೆ ಒಂದು ರೀತಿಯ ಸಮಾಧಾನವಾಯಿತು.
ಆ ಸಮಾಧಾನದ ಫಲವಾಗಿ ಬೇರೆಯ ಯೋಚನೆಗಳು ಮೂಡಿದುವು.
ಸಿಂಬಾದ ನಾವಿಕನ ಕೊರಳಿಗೆ ಆತು ಕುಳಿತಿದ್ದ ಮುದಿ ಮುದುಕನ ಹಾಗಿದ್ದಳು
ಆ ಹೆಂಡತಿ. ಕೊಸರಿ ಎಸೆಯುವುದು ಸುಲಭವಾಗಿರಲಿಲ್ಲ. ಧರ್ಮದ ಕಾನೂನಿನ
ಗಾರೆಯಿಂದ ಆಕೆಯನ್ನು ಆತನಿಗೆ ಅಂಟಿಸಿದ್ದರು. ಸದ್ದಿಲ್ಲದೆ ಜಾರಿಸಿಕೊಳ್ಳುವಂತಿರಲಿಲ್ಲ.
ಸದ್ದುಮಾಡಿ ಬಿರುಕು ಹುಟ್ಟಿಸಿ ಒಡೆಯುವ ಅಗತ್ಯವಿತ್ತು. ಜನರ ಮಾತಿಗೆ, ಲೋಕಾಪ
ವಾದಕ್ಕೆ, ಆತ ಹೆದರಿದನೆಂದಲ್ಲ. ಆದರೆ ಆ ಪ್ರಕರಣಕ್ಕೆ ಆಗ ಆತ ಸಿದ್ಧನಿರಲಿಲ್ಲ.
ತನ್ನ ಯೋಜನೆಗಳನ್ನೆಲ್ಲ ಕಾರ್ಯಗತಗೊಳಿಸಲು, ತನಗಿಷ್ಟವಿದ್ದಂತೆ ಸ್ವೇಚ್ಛಾಚಾರಿ
ಯಾಗಿ ಬದುಕಲು, ದೀರ್ಘವಾದ ಪೂರ್ವಸಿದ್ಧತೆಯ ಅಗತ್ಯವಿತ್ತು.
ಆತನ ದೃಷ್ಟಿಯಲ್ಲಿ ಹೆಣ್ಣು ಯಾವಾಗಲೂ ಕೀಳೇ. ಹೆಚ್ಚೆಂದರೆ ಅಡುಗೆಯ
ಮನೆ ಆಕೆಯ ಆವಾಸ. ಗಂಡಸಿನ ಚರಣದಾಸಿಯಾಗಿ ಆಕೆ ಇರಬೇಕು; ಆತನನ್ನು
ಅಧೀನದಲ್ಲಿಟ್ಟುಕೊಂಡು ಆಳಬಯಸುವುದಲ್ಲ.
ಆದರೆ ದೇಹ ಹೆಣ್ಣನ್ನು ಬಯಸುತ್ತಿತ್ತು. ತನ್ನನ್ನೆ ತಾನು ಪರಿವರ್ತಿಸುವ
ಕಠಿನ ಶಿಸ್ತಿನಲ್ಲಿ ಶಿಥಿಲವಾದ ಅಂಶವಾಗಿತ್ತು ಹೆಣ್ಣು.
ತಾನು ಹೆಣ್ಣನ್ನು ಬಯಸಿದಾಗಲೂ ಹೊಸ ಮನುಷ್ಯ ಪುಟ್ಟಣ್ಣನಾಗಿಯೇ
ಉಳಿಯಬೇಕೆಂದು ಆತ ಇಚ್ಛಿಸಿದ. ಅದಕ್ಕಾಗಿ ಬೆಲೆವೆಣ್ಣುಗಳ ಬಳಿಗೆ ಸರಿದ. ಅದೂ
ಒಂದು ಪ್ರಯೋಗ. ಆದರೆ, ಒಂದೇ ಎಂಜಲು ತಟ್ಟೆಯೊಳಗೆ ಹತ್ತಾರು ಕೈಗಳನ್ನು
ಕಂಡಾಗ ಆತನಿಗೆ ವಾಕರಿಕೆ ಬಂತು. ಆ ಕಾರಣದಿಂದ, ಹೆಚ್ಚು ವೆಚ್ಚಮಾಡಿ ತನಗೋ
ಸ್ಕರವೇ ಅಲ್ಲಿ ಇಲ್ಲಿ ದೊರಕಿಸಿಕೊಳ್ಳಲು ಯತ್ನಿಸಿದ. ಆಗ ಆತನ ಬ್ಯಾಂಕ್ ಲೆಕ್ಕ
ನಕ್ಕಿತು. ಸಿರಿವಂತಿಕೆಯ ಆ ಹಂತವನ್ನು ನೀನಿನ್ನೂ ಮುಟ್ಟಿಲ್ಲ-ಎಂದಿತು ಮನಸ್ಸು.
ಹೀಗಾಗಿ ಪುಟ್ಟಣ್ಣ ಮತ್ತೆ ಹೆಂಡತಿಯ ಯೋಚನೆ ಮಾಡಿದ.
ಹೃದಯಗಳು ಗಾವುದದಾಚೆ ಇದ್ದೂ ದೇಹಗಳು ಸಮೀಪವಾಗುವುದನ್ನು
ಸಾಧ್ಯಗೊಳಿಸಬೇಕೆಂದು ಆತ ನಿರ್ಧರಿಸಿದ.

****

15