ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

114

ಕನಸು

ಒಂದು ರಾತ್ರೆ ಗಂಡ ತನ್ನ ಬಳಿಗೆ ಬಂದಾಗ ಸುನಂದೆಗೆ ಆಶ್ಚರ್ಯವಾಯಿತು.
ಹಿಂದೆ ನಡೆದುದರ ಪುನರಾವರ್ತನೆಯಲ್ಲಿ ಆಕೆಗೆ ಆಸಕ್ತಿ ಇರಲಿಲ್ಲ. ಸ್ವಂತದ ಅಪೇಕ್ಷೆ
ಗಳು ಈಗ ಅವಳಿಗಿರಲಿಲ್ಲ. ಆದರೂ ವಿರೋಧಿಸದೆ ಆಕೆ ಸುಮ್ಮನಿದ್ದಳು.
ದಿನಗಳ ಅಂತರದ ಬಳಿಕ ಅನಂತರವೂ ಒಮ್ಮೆ. ಆಮೇಲೂ ಎಂದಾದರೊಮ್ಮೆ
ಆಗಾಗ್ಗೆ.
ಪುಟ್ಟಣ್ಣ ಆಕೆಯನ್ನು ತನ್ನ ಕೊಠಡಿಗೆ ಕರೆಯುತ್ತಿರಲಿಲ್ಲ. ಬದಲು ಅವಳಿದ್ದ
ಲ್ಲಿಗೇ ಬಂದು ಹೋಗುತ್ತಿದ್ದ. ಆತನ ವರ್ತನೆಯಲ್ಲಿ ನಯವಿರಲಿಲ್ಲ. ಒಲವಿರಲಿಲ್ಲ.
ಎಲ್ಲವೂ, ದೇಹಬಾಧೆ ತೀರಿಸಲು ಕಕ್ಕಸಿಗೆ ಹೋಗಿ ಬಂದ ಹಾಗೆ.
ಆಕೆಗೆ ಇದು ಅಸಹ್ಯವಾಗಿತ್ತು. ಗಂಡ ಬಳಿಗೆ ಬಂದಾಗ ಹೃದಯ ಮೈ ಎರಡೂ
ಮುದುಡಿಕೊಳ್ಳುತ್ತಿದ್ದುವು.
ಮೆಲ್ಲಮೆಲ್ಲನೆ ಮೃಗವಾಗುತ್ತಿದ್ದ ಆ ಮನುಷ್ಯ, ಯಾವ ರಾತ್ರೆ ಎಷ್ಟು ಹೊತ್ತಿಗೆ
ತನ್ನೆಡೆಗೆ ಬರುವನೋ ಎಂದು ಭಯದಿಂದಲೆ, ನಿದ್ದೆಯಿಲ್ಲದೆ ಹೊತ್ತು ಕಳೆಯುವ
ಹಾಗಾಯಿತು ಸುನಂದೆಯ ಗತಿ.
ಒಂದು ರಾತ್ರೆ ಗಂಡ ತನ್ನೆಡೆಗೆ ಬಂದಾಗ ಸುನಂದಾ ಅಂದಳು:
“ನನಗೆ ತಡೆಯೋಕಾಗದ ತಲೆನೋವು. ದಯವಿಟ್ಟು ಹತ್ತಿರ ಬರಬೇಡಿ.”
ಆತ, ಏನು ಮಾಡಬೇಕೆಂದು ತಿಳಿಯದೆ ಒಂದರೆ ಕ್ಷಣ ಕತ್ತಲಲ್ಲಿ ನಿಂತುದನ್ನು
ಆಕೆ ಕಂಡಳು. 'ಇವತ್ತು ಪಾರಾದೆ' ಎಂದುಕೊಂಡಳು. ಆದರೆ ಹಾಗೆ ಯೋಚಿಸು
ತ್ತಿದ್ದಾಗಲೇ ಆತ ಮಂಡಿಯೂರಿ ಕುಳಿತು ಆಕೆಯ ಎರಡೂ ಕೈಗಳನ್ನು ಬಲವಾಗಿ
ತಿರುವಿ ನೋಯಿಸಿದ.
ಆತನ ಮುಖಕ್ಕೆ ಉಗುಳಬೇಕೆಂದು ತೋರಿದರೂ ಆಕೆ ಎಂದಳು:
“ದಮ್ಮಯ್ಯ, ಬಿಟ್ಬಿಡಿ!”
ಅವನು ಬಿಡಲಿಲ್ಲ. ಸುನಂದಾ ಸೋಲನ್ನೊಪ್ಪಿಕೊಂಡು ಸುಮ್ಮನಾದಳು.
ಆತ ಏಳುತ್ತಿದ್ದಂತೆಯೇ ಆಕೆ ಕೇಳಿದಳು:
“ನಾನು ಸತ್ತು ಶವವಾದ ಮೇಲೂ ಹೀಗೇ ಮಾಡ್ತೀರಿ, ಅಲ್ಲ?”
ಆ ಮಾತು ಕೇಳಿ ಮೈ ಉರಿದಂತಾಗಿ, ಆಕೆಯನ್ನು ಹೇಗೆ ದಂಡಿಸಬೇಕೆಂದು
ತೋಚದೆ, ಪುಟ್ಟಣ್ಣ ಅಲ್ಲೆ ನಿಂತ.
ಸೋಲಿನ ಅವಮಾನದ ದುಃಖವೆಲ್ಲ ಒತ್ತರಿಸಿ ಬಂದು, ಬಿಗಿದ ಹಲ್ಲುಗಳೆಡೆ
ಯಿಂದಲೆ ಸುನಂದಾ ಅಂದಳು:
“ರಾಕ್ಷಸ!”
ಹಾಸಿಗೆಯ ಮೇಲಿದ್ದ ಆಕೆಯನ್ನು ಪುಟ್ಟಣ್ಣ ಕಾಲಿನಿಂದ ಒದ್ದ. ಹೊರಗೆ
ಕೇಳಿಸುವ ಹಾಗಿರದಿದ್ದರೂ ಒಳಗಿನ ಮಟ್ಟಿಗೆ ಸಾಕಷ್ಟು ಗಟ್ಟಿಯಾಗಿಯೇ ಆತನೆಂದ:
"ಇನ್ನೊಮ್ಮೆ ಹಾಗೇನಾದರೂ ಅಂದರೆ ಹಲ್ಲು ಮುರೀತೀನಿ. ನನ್ನ ಅನ್ನ