ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

117

ತೊಟ್ಟಿಲಿನಿಂದೆತ್ತಿ ತನ್ನ ಹಾಸಿಗೆಯ ಮೇಲೆಯೆ ಮಲಗಿಸಿ, ತಾನೂ ಅದರ ಬಳಿಯಲ್ಲೆ
ಕಾಲು ಚಾಚಿದಳು.
ತನ್ನ ಎದೆಗೆ ಮೈಗೆ ತಗಲಿಯೇ ಮಲಗಿದ್ದ ಮಗುವಿನ ಶಾಖ ಆಕೆಯ ದೇಹದ
ಲ್ಲೆಲ್ಲ ಸಂಚಾರಮಾಡಿತು. ಲೋಕಕ್ಕೂ ತನಗೂ ನಡುವಿನ ಏಕಮಾತ್ರ ತಂತುವಾಗಿದ್ದ
ಆ ಕಂದಮ್ಮನನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡು, ತನ್ನ ಅಪಾರ ಪ್ರೀತಿಯ
ಸಂಕೇತವಾಗಿ ಅದನ್ನು ಆಕೆ ಮುದ್ದಿಸಿದಳು.
...ನಸುಕಿನಲ್ಲಿ ಆಕೆಗೆ ಸ್ವಲ್ಪ ನಿದ್ದೆ ಬಂತು.
ಆ ನಿದ್ದೆಯಲ್ಲಿ ಕನಸು: ಯಾರೋ ಕಂಠಿಸರವನ್ನು ಕಸಿಯು ಹೊರಟಂತೆ; ಕೈ
ಬಳೆಗಳನ್ನು ಕದಿಯ ಬಂದಂತೆ; ಹಣೆಯ ಕುಂಕುಮವನ್ನು ಅಳಿಸಲು ಯತ್ನಿಸಿದಂತೆ.
ಮೃದುವಾಗಿ ಎದೆ ಮುಟ್ಟಿದ ಬೆರಳುಗಳು ಒರಟಾಗಿ ಕತ್ತನ್ನು ಹಿಸುಕಿದಂತೆ. ಆದರೂ
ಮಗುವನ್ನು ಬಚ್ಚಿಟ್ಟುಕೊಂಡು ಸುನಂದಾ ಆ ಶಕ್ತಿಗಳಿಗಿದಿರು ಹೋರಾಡಿದಳು.
ಹೋರಾಡಿ ಆಕೆಗೆ ಆಯಾಸವಾಯಿತು.
....ಕನಸಿನ ಲೋಕದಿಂದ ಹೊರಬಂದು ಕಣ್ಣು ತೆರೆದಳು ಸುನಂದಾ. ಬೆಳ
ಗಾಗಿತ್ತು. ಬಳಲಿದ್ದ ಆಕೆಯ ದೇಹದಲ್ಲಿ ಎದ್ದು ಓಡಾಡುವ ಚೈತನ್ಯ ಇದ್ದಂತೆ
ತೋರಲಿಲ್ಲ.

೧೯

ರಾಧಮ್ಮ ಕೂಗಿ ಕರೆದರು:
“ಸುನಂದಾ, ಬೇಗ್ಬನ್ರೀ...ಇಲ್ನೋಡಿ ಏನಾಗ್ತಿದೇಂತ.”
'ಕೋತಿ ಕುಣೀತಿದೆ. ತಮಾಷೆ ನೋಡು, ಬಾ' ಎಂದು ಕರೆದ ಹಾಗಿರಲಿಲ್ಲ
ಆ ಸ್ವರ. ಸಂಭವಿಸುತ್ತಿದ್ದ ಯಾವುದನ್ನೋ ನಂಬಲಾಗದೆ, 'ನೀನೂ ಒಮ್ಮೆ ನೋಡು'
ಎಂದು ಒತ್ತಾಯಿಸಿದ ಹಾಗಿತ್ತು.
ಪಕ್ಕದ ಹಿತ್ತಿಲಿನ ದರಿದ್ರರ ಕಥೆಯೇ ಇರಬೇಕು, ಎಂದುಕೊಂಡೇ ಸುನಂದಾ
ಹೊರಬಂದಳು. ಆ ದಿನ ಬೆಳಗಿನಿಂದಲೇ ಅಲ್ಲಿಂದ ಜಗಳದ ಮಾತುಗಳು ಕೇಳಿ ಬರು
ತಿದ್ದುವು. ನಮ್ಮ ಸಂಸಾರದ ಹಾಗೆಯೇ ಇವರದೂ ಒಂದು, ಎಂದು ಸುನಂದಾ
ಯಾವ ಆಸಕ್ತಿಯನ್ನೂ ತೋರಿರಲಿಲ್ಲ.
ಅಂಗಳದಲ್ಲಿ ನಿಂತಿದ್ದ ರಾಧಮ್ಮನನ್ನು ನೋಡಿ ಸುನಂದಾ ಕೇಳಿದಳು:
“ಏನಾಯ್ತು ರಾಧಮ್ಮ?”
ಉತ್ತರವಾಗಿ ಅವರು ಎಡಗಡೆ ಬೊಟ್ಟು ಮಾಡಿದರು.