ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

118

ಕನಸು

ಹೊಟ್ಟೆಯ ಪಾಡಿಗೋಸ್ಕರ ಊರೂರು ಅಲೆದು ಬಂದಿದ್ದ ದುಡಿಯುವ ಹೆಣ್ಣು
ಜೀವ ಹಿತ್ತಿಲ ಗೋಡೆಗೊರಗಿಕೊಂಡು ಅಳುತ್ತ ನಿಂತಿತ್ತು. ಆ ಕರಿಯ ಹಣೆಗೆ ಏಟು
ಬಿದ್ದು, ಮೂಗು ಮುಖಗಳ ಮೇಲಿನಿಂದ ರಕ್ತದ ಧಾರೆ ಇಳಿಯುತ್ತಿತ್ತು. ಅದರ ಜತೆ
ಯಲ್ಲೆ ಕಣ್ಣೀರು.
ರಾಧಮ್ಮ ಹೇಳಿದರು:
“ಇವತ್ತು ಬೆಳಗಿನಿಂದಲೆ ಶುರುವಾಯ್ತು ರಾಮಾಯಣ. ಕೇಳಿಸ್ತಾ ಇತ್ತೆ
ನಿಮಗೆ?”
ಕೇಳಿಸಿತ್ತು. ಆದರೆ ತನ್ನ ರಾಮಾಯಣವೂ ಅದಕ್ಕಿಂತ ಕಡಮೆಯಲ್ಲ ಎಂದು
ನಂಬಿದ್ದ ಸುನಂದಾ ಅತ್ತ ಲಕ್ಷ್ಯ ಕೊಟ್ಟಿರಲಿಲ್ಲ.
“ಹೂಂ ರಾಧಮ್ಮ. ಇವರ ಗೋಳು ನಿತ್ಯ ಇದ್ದದ್ದೇ ಅಂತ ಸುಮ್ಮನಿದ್ದೆ.”
“ಇವತ್ತು ನಿತ್ಯಕ್ಕಿಂತ ಸ್ವಲ್ಪ ಜಾಸ್ತಿಯಾಗಿದೆ.”
“ಏನು?”
“ಮನೆ ಬಿಟ್ಟು ಹೊರಟ್ಹೋಗ್ತೀನಿಂತ ಈಕೆ ಹೇಳ್ತಿದಾಳೆ. ಆತ, ಈಗಲೇ
ಹೊರಡು ಅಂತಿದಾನೆ.”
ತನ್ನ ಮುಖದ ಮೇಲೊಂದು ನಿಶ್ಚಲತೆಯ ತೆರೆಯನ್ನು ಇಳಿಬಿಟ್ಟು ಸುನಂದಾ
ಕೇಳಿದಳು:
“ಪಾಪ! ಎಲ್ಲಿಗೆ ಹೋಗ್ತಾಳಂತೆ?"
ಅದರ ಹಿಂದೆಯೇ, ಇನ್ನೊಂದು ಪ್ರಶ್ನೆ ಅವ್ಯಕ್ತವಾಗಿಯೇ ಉಳಿಯಿತು:
'ತವರು ಮನೆ ಇದೆಯೇನು ಆಕೆಗೆ?'
“ಎಲ್ಲಿಗೆ ಹೋದಾಳು ಪಾಪ! ಒಂದು ಸಂಸಾರವೇ-ಸಂಬಂಧಿಕರೇ? ಮನೆ ಬಿಟ್ಟು
ಹೋದ ಆ ಮಗನಂತೂ ಬರಲೇ ಇಲ್ಲ. ಪರದೇಶಿ ಹುಡುಗನಾಗಿ ಹೊರಟ್ಹೋದ.
ಇನ್ನು ಇವಳು ದೇಶಾಂತರ ಅಲೀತಾಳೆ.”
“ಮಗು?”
“ಅದನ್ನೂ ಕಟ್ಕೊಂಡ್ಹೋಗ್ತಾಳೆ.”
...ಹೆಂಗಸು ಅಳುವುದು ನಿಂತಿತು. ಗಂಡಸು ಗುಡಿಸಲಿನಿಂದ ಹೊರ ಬರಲಿಲ್ಲ.
ಈಗ, ವ್ಯಥೆಯ ಬದಲು ಆಕೆಯ ಮುಖದ ಮೇಲೆ ನಿರ್ಧಾರದ ಭಾವ ಮೂಡಿತು.
ನಿಂತಲ್ಲಿಂದಲೇ, ಹೊರಬಂದ ಸುನಂದೆಯನ್ನು ಕಂಡು, ಆಕೆ ಹೇಳಿದಳು:
“ಪಾರಮ್ಮಾ ಪಾರ್.”
ಅದು 'ನೋಡಮ್ಮಾ ನೋಡು. ನನ್ನ ಬದುಕು ಹ್ಯಾಗಾಗ್ತಿದೆ ಅನ್ನೋದನ್ನ
ನೋಡು' ಎನ್ನುವ ಧ್ವನಿ.
ಅಷ್ಟು ಹೇಳಿದ ಹೆಂಗಸು, ಸುನಂದೆಯ ಪ್ರತಿಕ್ರಿಯೆಯೊಂದನ್ನೂ ಇದಿರು
ನೋಡದೆ, ಒಳಗಿದ್ದ ಗಂಡಸಿನ ಕಿವಿಗೆ ನಾಟುವಂತೆ ಅಂದಳು: