ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

119

“ನಾಚಿಕೆ ಇಲ್ದೋನೆ! ನನ್ನ ಬಟ್ಟೆಬರೇನಾದರೂ ಹೊರಗೆ ಹಾಕು. ಅದನ್ನೂ
ನಿನ್ನ ರಾಣಿಗೆ ಕೊಡಬೇಕೂಂತಿದೀಯಾ?”
ತನ್ನೆದುರಿನಲ್ಲಿ ನಡೆಯುತ್ತಿದ್ದ ಆ ರುದ್ರನಾಟಕವನ್ನು ನೋಡಲಾರದೆ ಸುನಂದಾ
ರಾಧಮ್ಮನಿಗೆ ಹೇಳಿದಳು:
“ನೀವಾದರೂ ಒಂದಿಷ್ಟು ಅವರಿಗೆ ಬುದ್ಧಿವಾದ ಹೇಳಬಾರ್ದೆ ರಾಧಮ್ಮ?”
“ಎಲ್ಲಾ ಆಯ್ತು ಕಣ್ರೀ... ಇನ್ನು ನಾವು ಮಾಡುವಂಥಾದ್ದೇನೂ ಉಳಿದಿಲ್ಲ.”
ಬೆಳಗಿನಿಂದ ಅಲ್ಲಿ ಏನಾಯಿತೆಂಬುದನ್ನು ರಾಧಮ್ಮ ಸಂಕ್ಷಿಪ್ತವಾಗಿ ಹೇಳಿದರು:
ಆ ದಿನ ಬೆಳಗ್ಗೆ ಆತ ಕೆಲಸಕ್ಕೆ ಹೋಗಲಿಲ್ಲ. ಆಕೆ ಬಯ್ದಳು. ಆತ ಬೀಡಿಗೆ
ಕಾಸು ಕೇಳಿದ. ತನ್ನ ಸಂಪಾದನೆಯನ್ನೆಲ್ಲ ಕುಡಿಯುವುದಕ್ಕೆ ಉಪಯೋಗಿಸುತ್ತಿದ್ದ
ಆ ಗಂಡಸಿಗೆ ಆಕೆ ಏನನ್ನೂ ಕೊಡಲಿಲ್ಲ. “ಹೋಗಿ ಸಂಪಾದ್ಸು. ನಿಮ್ಮಪ್ಪ ಗಂಟು
ಕಟ್ಟಿ ಇಲ್ಲಿ ಮಡಗಿಲ್ಲ” ಎಂದಳು. ಆತ ಹೊಡೆಯಲು ಬಂದ. ಕೈಗೆ ಕೈ ಹತ್ತಿತು...
“ಎದುರು ಮನೆ ಜವಾನ ಒಂದ್ಸಲ ಹೋಗಿ ಜಗಳ ನಿಲ್ಲಿಸಿ ಬಂದ ಕಣ್ರೀ..." “ಗಲಾಟೆ
ಮಾಡಿದರೆ ಪೋಲೀಸರಿಗೆ ಕೊಡ್ತೀವಿ” ಎಂದು ಗದರಿಸಿದ್ದಾಯಿತು. ಆತ, “ಬಹಳ
ನೋಡಿದೀನಿ ಪೋಲೀಸರ್ನ” ಎಂದು ಬಿಟ್ಟ. ಈ ದಿನ ಈಕೆ ಮುಸುರೆ ತಿಕ್ಕುವ ಕೆಲ
ಸಕ್ಕೂ ಹೋಗಲಿಲ್ಲ. ಸೈಟಿನ ಯಜಮಾನ ನಾಗೇಂದ್ರಪ್ಪನ ಮನೆಯ ಆಳು ಬಂದು
ಆಕೆಯನ್ನು “ಯಾಕೆ ಬರಲಿಲ್ಲ?” ಎಂದು ಗದರಿಸಿ ಕೇಳಿದ ಆ ಹೆಂಗಸು ಉತ್ತರವನ್ನೇ
ಕೊಡಲಿಲ್ಲ...
“ಅವಳಿಗೆ ಸಾಕಾಗಿ ಹೋಗಿದೆ ಸುನಂದಾ."
“ಅಯ್ಯೋ ಪಾಪ!”
“ಎಷ್ಟು ದಿನಾಂತ ಸಹಿಸ್ತಾಳೆ? ಆತನೋ ನಾಯಿಬಾಲ ಇದ್ದ ಹಾಗೆ. ಯಾವಾ
ಗಲೂ ಡೊಂಕೇ. ಇವಳ ಬಾಯಿನೂ ಸ್ವಲ್ಪ ಕೆಟ್ಟದ್ದೇ ನಿಜ. ಆದರೆ ಆತ ಶುದ್ಧ
ಲಫಂಗ ಕಣ್ರೀ. ಇವಳು ಇಷ್ಟು ಜೋರಾಗಿ ಇಲ್ದೇ ಇದ್ದಿದ್ರೆ ಯಾವಾಗಲೋ ಇವಳ್ನ
ಮೂರು ಕಾಸಿಗೆ ಮಾರ್ತಿದ್ದ.”
ಸುನಂದೆಯ ಮೈ ನಡುಗಿತು. ಮಾತು ಹೆಪ್ಪುಗಟ್ಟಿತು.
ಅಷ್ಟರಲ್ಲೆ ಆ ಗಂಡಸು ಸುತ್ತುಮುತ್ತೆಲ್ಲ ಕೆಂಗಣ್ಣಿನಿಂದ ನೋಡುತ್ತ, ಗವಿಯಿಂದ
ಹೊರಟ ಹುಲಿಯ ಹಾಗೆ ಗುಡಿಸಲಿನಿಂದ ಹೊರಬಂದ. ಅವನ ಕೈಯಲ್ಲಿ ಹೊಗೆ
ಯಾಡುತ್ತಿದ್ದೊಂದು ಬೀಡಿಯ ತುಂಡಿತ್ತು. 'ಈಕೆ ಹೊರಗೆ ಹರಟುತ್ತಿದ್ದರೂ ನಾನು
ಒಳಗೆ ಬೀಡಿ ಸೇದುತ್ತಾ ನಿರ್ಲಿಪ್ತನಾಗಿಯೆ ಇದ್ದೆ'-ಎನ್ನುವ ಹಾಗೆ.
ಅತ್ತಿತ್ತ ನೋಡುತ್ತ ಆತ ಬೀದಿಗಿಳಿದ.
ಆ ಸಂದರ್ಭವನ್ನು ಪ್ರಯೋಗಿಸಿ ಆ ಹೆಂಗಸು ಹಟ್ಟಿಯೊಳಕ್ಕೆ ಧಾವಿಸಿದಳು.
ಅಲ್ಲಿದ್ದ ತನ್ನ ಬಟ್ಟೆ ಬರೆಯನ್ನೆಲ್ಲ ಗಂಟು ಕಟ್ಟಿದಳು. ಮಡಿಕೆ ಕುಡಿಕೆಗಳೆಡೆಯಲ್ಲಿ
ತಾನು ಬಚ್ಚಿಟ್ಟಿದ್ದ ಪುಡಿಕಾಸುಗಳನ್ನೆಲ್ಲ ಎತ್ತಿಕೊಂಡಳು. ಹೊರಕ್ಕೆ ಬಂದು, ಮೂಟೆ