ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಕನಸು

120

ಯನ್ನು ಹೆಗಲಿಗೇರಿಸಿ, “ಬಾ” ಎಂದು ತನ್ನ ಹೆಣ್ಣು ಮಗುವನ್ನು ಕರೆದು, ಅದನ್ನು
ಕಂಕುಳಲ್ಲೆತ್ತಿಕೊಂಡಳು. ತಮ್ಮ ಅಂಗಳದಲ್ಲಿ ತನ್ನನ್ನು ನೋಡುತ್ತ ನಿಂತಿದ್ದ
ಹೆಂಗಸರತ್ತ ತಿರುಗಿ ಆಕೆಯೆಂದಳು:
“ಹೋಗ್ತೀನಿ ಅಮ್ಮಾ.”
ವಾಡಿಕೆಯಂತೆ, 'ಹೋಗಿ ಬರ್ತೀನಿ' ಎಂದೂ ಹೇಳುವ ಹಾಗಿರಲಿಲ್ಲ ಪರಿಸ್ಥಿತಿ.
ರಾಧಮ್ಮ ಆಕೆಯನ್ನು ಕರೆದರು:
“ಇಲ್ಲಿ ಬಾರೇ. ಈ ತಿಂಗಳಲ್ಲಿ ಇಷ್ಟು ದಿವಸದ ನಿನ್ನ ಸಂಬಳ ಬಾಕಿ ಇದೆಯಲ್ಲ.
ತಗೊಂಡು ಹೋಗು. ನಿನ್ನ ಋಣ ನಮ್ಮ ಮೇಲಿಟ್ಟು ಹೋಗ್ಬೇಡ.”
ಆಕೆ ತಮ್ಮ ಹಿತ್ತಿಲೊಳಕ್ಕೆ ಬಂದಂತೆ ರಾಧಮ್ಮ, ಒಳಹೋಗಿ ದುಡ್ಡೆಣಿಸಿ,
ಹೆಚ್ಚಾಗಿಯೇ ನಾಲ್ಕಾಣೆಯನ್ನು ಸೇರಿಸಿ, ತಂದರು.
ಯಾಂತ್ರಿಕವಾಗಿ ಸುನಂದೆಯೂ ಒಳಹೋದಳು. ದೇವರ ಪಠದ ಹಿಂದಿರಿಸಿದ್ದ
ಹಣದಲ್ಲಿ ಎರಡು ರೂಪಾಯಿಯದೊಂದು ನೋಟಿತ್ತು. ಲೆಕ್ಕದಂತೆ ಆಕೆ ಆ ತಿಂಗಳ
ಅಷ್ಟು ದಿನಗಳಿಗೆ ಕೊಡಬೇಕಾದುದು ಒಂದು ರೂಪಾಯಿ. ಹಾಗಿದ್ದರೂ ಎರಡರ
ನೋಟನ್ನೇ ಸುನಂದಾ ಹೊರಗೆ ತಂದಳು.
ರಾಧಮ್ಮ ಕೊಟ್ಟುದನ್ನು ಹಿಡಿದುಕೊಂಡಿದ್ದ ಆ ಹೆಂಗಸು ಸುನಂದೆ ಕೊಟ್ಟ
ನೋಟನ್ನೂ ಪಡೆದಳು. ಸುನಂದಾ ಎರಡು ರೂಪಾಯಿ ಕೊಟ್ಟುದನ್ನು ಕಂಡು
ರಾಧಮ್ಮನಿಗೆ ಅಭಿಮಾನವೆನಿಸಿತು; ತನ್ನ ಬಳಿ ಅಷ್ಟಿಲ್ಲವಲ್ಲಾ ಎಂದು ಬೇಸರವಾಯಿತೇ
ಹೊರತು, ಅಸೂಯೆ ಎನ್ನಿಸಲಿಲ್ಲ.
ಆ ಗಂಡಸು ಎಲ್ಲಿ ನೋಡುತ್ತಿರುವನೋ ಎಂದು ಅತ್ತಿತ್ತ ಅಂಜಿಕೆಯ ನೋಟ
ಬೀರುತ್ತಲೆ, ಹಣವನ್ನೆಲ್ಲ ಆ ಹೆಂಗಸು ತನ್ನ ಮೂಟೆಯೊಳಗೆ ಇರಿಸಿಕೊಂಡಳು.
ಹಾಗೆ ಮಾಡಿ, ರಾಧಮ್ಮ ಸುನಂದೆಯರತ್ತ ಕಣ್ಣೆತ್ತಿ ನೋಡಿದಾಗ, ಬತ್ತಿಹೋಗಿದ್ದ
ಆಕೆಯಕಣ್ಣ ಕೊಳದಿಂದ ಮತ್ತೆ ಒರತೆ ಚಿಮ್ಮಿತು.
ವ್ಯಥೆಯಿಂದ ಕೂಡಿದ್ದ ಸ್ವರದಲ್ಲಿ ಸುನಂದಾ ಹೇಳಿದಳು:
“ಎಲ್ಲಿಗಮ್ಮ ಹೋಗ್ತೀಯಾ?”
“ಎಲ್ಲಿಗಾದರೂ ಹೋಗ್ತೀನಿ ತಾಯಿ. ನಿಮ್ಮಂಥ ನಾಲ್ಕು ಜನರ ಮನೇಲಿ
ಕೆಲಸಮಾಡಿ ದಿನ ತಳ್ತೀನಿ. ಮಗನಂತೂ ದೊಡ್ಡೋನಾಗಿ ಹೊರಟ್ಹೋದ. ಇನ್ನು
ಇದೊಂದು ಮಗು. ಅಯ್ಯೋ ಬಿಡಿ. ಹ್ಯಾಗಾದರೂ ಬೆಳೆಯುತ್ತೆ."
“ಒಬ್ಬಳೇ ಇರೋಕೆ ಕಷ್ಟ ಆಗಲ್ವೆ?”.
“ಈಗ ಇಬ್ಬರೂ ಇದ್ದು ಸಿಕ್ಕಿದ ಸುಖ ಯಾವುದು ತಾಯಿ?”
ರಾಧಮ್ಮ ತಾನೂ ಮಾತು ಸೇರಿಸಿ ಅಂದರು:
“ನಿನ್ನಿಷ್ಟ, ಆದರೂ ಯೋಚ್ನೆಮಾಡಿ ನೋಡು. ಒಮ್ಮೆ ಮುರಿದ್ಮೇಲೆ
ಕೂಡ್ಸೋಕಾಗಲ್ಲ. ಕೂಡಿಸಿದರೂ ಅದು ಮೊದಲಿನ ಹಾಗೆ ಭದ್ರವಾಗಿರೋಲ್ಲ........