ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

122

ಕನಸು



ಕನಿಕರದ ನುಡಿ:
"ಪಾಪ!"
ಅಷ್ಟು ಹೇಳಿ ಕುಸುಮಾ ಒಳಹೋದಳು.
ರಾಧಮ್ಮನಿಗೆ ಆ ಸಂಭಾಷಣೆಯ ವಿಷಯ ತಿಳಿದರೂ ಮುಖ್ಯವೆಂದು ತೋರಿದ
ಒಂದು ಪದ ಅರ್ಥವಾಗಿರಲಿಲ್ಲ.
"ಆಕೆ ಅದೇನೋ ಅಂದಳಲ್ರೀ–ಇಂಗ್ಲಿಷಿನಲ್ಲಿ?"
"ಅದೇ? ಡೈವೋರ್ಸ್ ಅಂತ. ಡೈವೋರ್ಸ್ ಅಂದರೆ ವಿವಾಹ ವಿಚ್ಛೇದನ
ಕಣ್ರೀ. ಗಂಡ ಹೆಂಡ್ತಿ ಬೇರೆ ಬೇರೆಯಾಗೋದು."
“ಓ—"
ಶ್ಯಾಮ ತಿಂಡಿಗಾಗಿ ತಗಾದೆ ಮಾಡಿದನೆಂದು ರಾಧಮ್ಮ ಎದ್ದರು. ಸರಸ್ವತಿಗೆ
ಎಚ್ಚರವಾಯಿತೇನೋ ಎಂದು ನೋಡಲು ಸುನಂದೆಯೂ ಒಳಹೋದಳು.

****

ಈಗ ಯಾವಾಗಲೂ ಬಲು ದೀರ್ಘವೆಂದು ತೋರುತ್ತಿದ್ದ ಕತ್ತಲೆ ಮತ್ತೆ
ಬಂತು. ಕತ್ತಲೆ ಎಂದರೆ ಸುನಂದೆಗೀಗ ಎಲ್ಲಿಲ್ಲದ ಭಯ. ರಾತ್ರೆ ಹೊತ್ತು ತನಗಾಗಿ
ಕಾದಿರುವುದೇನೆಂದು, ಹಗಲು ಊಹಿಸುವುದು ಸಾಧ್ಯವೇ ಇರಲಿಲ್ಲ.
ಈ ದಿನದ ಘಟನೆ ಆಕೆಯ ಮೇಲೆ ತೀವ್ರ ಪರಿಣಾಮನವನ್ನುಂಟು ಮಾಡಿತ್ತು.
ಕುಸುಮಳಿಗೆ ತನ್ನ ವಿಷಯ ಏನೂ ತಿಳಿಯದು. ಆದರೆ ರಾಧಮ್ಮನಿಗೆ
ಹಾಗಲ್ಲ. ಆ ಬಡ ಸಂಸಾರ ಒಡೆದು ಹೋಳಾದ ರೀತಿಯನ್ನು ಕಂಡಾಗ, ತನ್ನ
ನೆರಮನೆಯ ಸಂಸಾರವೂ ಒಡಕಾಗಿದೆ ಎಂಬ ಅಂಶ, ಅವರ ಮನಸ್ಸಿನಲ್ಲಿ ಖಂಡಿತ
ಸುಳಿದಿರಬಹುದು.
ಕೆಟ್ಟವನಾಗಿದ್ದ ಗಂಡನನ್ನು ಆ ಬಡ ಹೆಂಗಸು ಬಿಟ್ಟು ಹೋಗಿದ್ದಳು.
ಮುಂದೇನು-ಎಂಬ ಭಯದಿಂದ ಆಕೆ ಕಂಗೆಟ್ಟಿರಲಿಲ್ಲ. ದಿನದಿನವೂ ದುಡಿದು ಸಂಪಾ
ದಿಸುವ ಆ ಜೀವಕ್ಕೆ ಬದುಕು ಈಸಲಾಗದ ಕಡಲಾಗಿ ತೋರಿರಲಿಲ್ಲ.
ಹೊರಟು ಬಿಡಬೇಕೆಂದು ಸಾವಿರ ಸಲ ಆ ಹೆಂಗಸು ಯೋಚನೆ ಮಾಡಿದ್ದಳಂತೆ.
ಆದರೆ ಹೊರಟಿರಲಿಲ್ಲ. ನಿನ್ನೆಯವರೆಗೂ ಆಕೆ ಸಹನೆಯಿಂದ ದಿನ ಕಳೆದಿದ್ದಳು.
ನಿನ್ನೆಯ ದಿನ ಸಹನೆಗೂ ಒಂದು ಪರಿಮಿತಿ ಇದೆ ಎಂಬುದನ್ನು ಮನಗಂಡು, ಆಕೆ
ಹೊರಟಳು.
ಇಂತಹ ಬದುಕಿಗಿಂತ ಸಾವು ಮೇಲು ಎಂದು ಎಂದಾದರು ಆಕೆ ಯೋಚಿಸಿ
ದ್ದಳೋ ಇಲ್ಲವೋ. ...ಸಾವು ಕೂಡ ಒಂದು ಪರಿಹಾರವೆಂಬುದನ್ನು ಆಕೆ ಪರಿಗೆಣಿಸಿ
ದಂತೆಯೇ ತೋರಲಿಲ್ಲ. ಪ್ರಾಯಶಃ, ರಮ್ಯ ಬದುಕಿನ ಕನಸನ್ನು ಆಕೆ ಕಾಣದುದೇ
ಇದಕ್ಕೆ ಕಾರಣವಿರಬಹುದು. ಆಕೆಯ ದೃಷ್ಟಿಯಲ್ಲಿ ಸುಖದುಃಖವೆಲ್ಲ ಸಮ್ಮಿಶ್ರಣಗೊಂಡ
ಒಂದೇ ವಸ್ತುವಾಗಿರಬಹುದು....