ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

10

ಕನಸು

"ಮಗು ನಿದ್ದೆ ಹೋಯ್ತೆ?"
"ಹೂಂ"
ಆ ಉತ್ತರವನ್ನು ಒತ್ತಿ ಹೇಳಿ ಹೃದಯದ ನೋವನ್ನೆಲ್ಲ ಒಳಕ್ಕೆ ತಳ್ಳಲು
ಸುನಂದಾ ಯತ್ನಿಸಿದಳು.
ಸಂಜೆಯ ಕಾಫಿಯೂ ನಿಂತು ಹೋಗಿ ಎಷ್ಟೋ ಕಾಲವಾಗಿತ್ತು. ಆದರೂ
ಯಾವುದೋ ಆಸೆಯಿಂದ ಸುನಂದಾ ಕೇಳಿದಳು:
"ಕಾಫಿಗೆ ನೀರಿಡಲಾ?"
"ಇದೇನು ಹೊಸದಾಗಿ ಕೇಳ್ತಿದೀಯಾ? ನನ್ನದಾಯ್ತು."
ಹಾಗೆ ಒರಟು ಸ್ವರದಲ್ಲಿ ಹೇಳುತ್ತ ಪುಟ್ಟಣ್ಣ ಕೈ ಗಡಿಯಾರ ಬಿಚ್ಚಿ, ಹೊತ್ತು
ನೋಡಿ, ಕಿವಿಯ ಬಳಿಗೆ ಅದನ್ನೊಯ್ದು, ಮತ್ತೆ ಕೈಗೆ ಕಟ್ಟಿದ. ಕಟ್ಟುತ್ತ ಆತ ಕೇಳಿದ:
"ನೀನಿನ್ನೂ ಕುಡೀಲಿಲ್ಲ?"
ಸುನಂದಾ ಕುಡಿದಿರಲಿಲ್ಲ. ಕಾಫಿ ಮಾಡಿದ್ದರಲ್ಲವೆ ಕುಡಿಯುವುದು? ಆದರೂ
ಬಿಮ್ಮನೆ ಬಿಗಿದಿದ್ದ ತುಟಿಗಳನ್ನು ಅರೆತೆರೆದು ಆಕೆ ಉತ್ತರವಿತ್ತಳು:
"ಕುಡಿದಾಯ್ತು."
"ಸರಿ ಮತ್ತೆ."
ಆತ ಚಪ್ಪಲಿ ಮೆಟ್ಟಿಕೊಂಡು ಬೀದಿಯತ್ತ ನೋಡಿದ.
"ಅಂಗಡಿ ಬೀದಿ ಕಡೆ ಹೋಗ್ತೀರೇನು?"
"ಯಾಕೆ? ಏನ್ಬೇಕಾಗಿತ್ತು ಈಗ?"
"ಮನೇಲಿ ತರಕಾರಿ ಏನೂ ಇಲ್ಲ."
ಪುಟ್ಟಣ್ಣ ಹುಬ್ಬು ಗಂಟಿಕ್ಕಿದ.
"ಎಷ್ಟು ಸಾರೆ ಹೇಳಿದೀನಿ ನಿಂಗೆ, ಮನೆ ಬಾಗಿಲಿಗೆ ಬಂದಾಗ್ಲೇ ಕೊಂಡುಕೋಂತ.
ಯಾರೂ ಮಾರ್ಕೊಂಡು ಬರಲೇ ಇಲ್ಲ, ಅಲ್ಲ?"
ಕಟುವಾಗಿದ್ದ ಆ ಸ್ವರದಲ್ಲಿ ವ್ಯಂಗ್ಯ ಬೆರೆತಿತ್ತು. ಅದನ್ನು ಕೇಳಿ ಒಮ್ಮೆಲೆ ಅಳು
ವಂತಾಯಿತು ಸುನಂದೆಗೆ. ಆದರು ಆಕೆ ಮನಸ್ಸನ್ನು ಕಠಿನ ಮಾಡಿಕೊಂಡು ಅಂದಳು:
"ಬಂದಿತ್ತು. ಆದರೆ ಕೊಂಡುಕೊಳ್ಳೋಕೆ ನನ್ನಲ್ಲಿ ದುಡ್ಡಿರಲಿಲ್ಲ."
ಪುಟ್ಟಣ್ಣ ఆ ಮಾತಿಗೆ ಮಾರುತ್ತರ ಕೊಡುವುದು ಒಂದು ನಿಮಿಷ ತಡವಾಯಿತು.
"ನಾನೀಗ ತರಕಾರಿ ಅಂಗಡೀಗೆ ಹೋಗ್ತಾ ಇಲ್ಲ. ಏನೂ ಇಲ್ದೆ ಹೋದರೆ
ನಾಳೆ ಬರೀ ಬೇಳೆ ಸಾರು ಮಾಡು."
"ನಿಮ್ಮಿಷ್ಟ."
ಗಂಡ ಹೊರಡುತ್ತಿದ್ದಂತೆಯೆ ಸುನಂದಾ, ಅಗಸರವನು ಬಂದಿದ್ದ ವಿಷಯ ಹೇಳ
ಬೇಕೇ ಬೇಡವೇ ಎಂದು ಅನಿರ್ಧಾರದ ಉಯ್ಯಾಲೆಯಲ್ಲಿ ಕ್ಷಣ ಕಾಲ ತೂಗಾಡಿದಳು.
ಆದರೆ ಗಂಡ ಬಾಗಿಲೆಳೆದುಕೊಂಡ ಸದ್ದು ತೂಗಾಟಕ್ಕೆ ಭಂಗ ತಂದಿತು.