ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



132

ಕನಸು

ಹೋದಳು.
ಬಂದಿದ್ದಾಕೆ ಮನಸಿನ ದುಗುಡವನ್ನು ಮುಚ್ಚಿಡಲಾರದೆ ಹೇಳಿದಳು:
"ನಾವು ಬೆಂಗಳೂರಿಗೆ ಬಂದದ್ದು ನಿಮ್ಮವರಿಗೆ ಇಷ್ಟವಾಗಲಿಲ್ಲಾ೦ತ ಕಾಣುತ್ತೆ.
ಸಾಕಮ್ಮ, ಇನ್ನು ಬರೋದಿಲ್ಲ."
ಮನಸ್ಸಿನೊಳಗೆ ನಕ್ಕರೂ ಹೊರಗೆ ಉಪಚಾರಕ್ಕಾಗಿ ಸುನಂದಾ ಅಂದಳು:
"ಹಾಗೇನಿಲ್ರೀ. ನೀವೇ ನೋಡಿದಿರಲ್ಲ, ಅವರ ಸ್ವಭಾವ."
ಬಸ್ಸು ಬಂತು. ಅವರೆಲ್ಲ ಹತ್ತಿ ಕುಳಿತುಕೊಂಡಂತೆ ಸುನಂದಾ ಹೇಳಿದಳು:
"ನನ್ನಿಂದೇನಾದರೂ ತಪ್ಪಾಗಿದ್ರೆ ಕ್ಷಮಿಸಿ ಅಕ್ಕಾ. ಮುಂದಿನ ವರ್ಷವೂ
ಬೆಂಗಳೂರಿಗೆ ಬನ್ನಿ. ಆಗಾಗ್ಗೆ ಬರ್ತಾನೇ ಇರಿ."
ಅವರನ್ನೆಲ್ಲ ಬಿಟ್ಟು ಮನೆಗೆ ಹಿಂತಿರುಗಿದಾಗ ಸುನಂದೆಯ ಮನಸ್ಸು ಹಗುರ
ವಾಗಿತ್ತು. ಗಟ್ಟಿಯಾಗಿ ಬಿದ್ದು ಬಿದ್ದು ನಗಬೇಕೆಂದು ತೋರುತ್ತಿತ್ತು ಆಕೆಗೆ. ತನ್ನ
ಗಂಡನ ಆಪ್ತ ಬಂಧುಗಳೇ ಬಂದು ಆತನ ಗುಣ ನಡತೆಯನ್ನು ಇದ್ದುದು ಇದ್ದಂತೆ
ತಿಳಿದುಕೊಳ್ಳುವಂತಾಯಿತೆಂದು, ಆಕೆಗೆ ಸಂತೋಷವಾಗಿತ್ತು.
ಆಕೆ ಮನೆ ಸೇರುತ್ತಿದ್ದಂತೆ ರಾಧಮ್ಮ ಕೇಳಿದರು:
"ಕಳಿಸ್ಕೊಟ್ಟು ಬಂದಿರೇನ್ರೀ?"
"ಹೂನಮ್ಮಾ."
"ಇರೋ ಕಷ್ಟ ಸಾಲದ್ದಕ್ಕೆ ಈ ಅತಿಥಿ ಸತ್ಕಾರ ಬೇರೆ. ಪರಮಾತ್ಮನಿಗೇ ಪ್ರೀತಿ
ಯಮ್ಮ ನಿಮ್ಮ ಅವಸ್ಥೆ."
ಕನಿಕರದಿಂದ ರಾಧಮ್ಮ ಹಾಗೆ ಆಡಿದ್ದರು, ಸಹಾನುಭೂತಿಯ ಮಾತೆಂದು
ಭಾವಿಸಿ. ಆದರೆ ಸುನಂದೆಯ ಮನೋಭಾವ ಆಗ ಹಾಗಿರಲಿಲ್ಲ. ಆ ಮೂರು ದಿನಗಳ
ಕಾಲ ಆಕೆಗೊಂದು ರೀತಿಯು ತೃಪ್ತಿ ದೊರೆತಿತ್ತು-ಬಲು ಕ್ರೂರವಾದ ತೃಪ್ತಿ. ಅದನ್ನು
ರಾಧಮ್ಮ ಅರಿತುಕೊಂಡಿರಲಿಲ್ಲ.
ಒಳಗೆ ಹೋಗಿ ಸುನಂದಾ, ನೆಂಟರ ಆ ಬಳಗ ಬಂದುಹೋದ ಬಳಿಕ ಸ್ವಲ್ಪ
ಅಸ್ತವ್ಯಸ್ತವಾಗಿದ್ದ ಆ ಮನೆಯನ್ನು ನೋಡಿದಳು. ಎಲ್ಲವನ್ನೂ ಸರಿಯಾಗಿರಿಸಿ ಕಸ
ಗುಡಿಸಬೇಕೆಂದುಕೊಂಡಳು. ಬಳಿಕ, 'ಈಗೇನು ಅವಸರ? ಗಂಡ ಬಂದು ಇದನ್ನೆಲ್ಲಾ
ನೋಡಲಿ. ಬಂದು ಹೋದವರ ನೆನಪಾದಾಗ ಆತ ವಿಚಿತ್ರವಾಗಿ ವರ್ತಿಸಬಹುದು.
ಸ್ವಾರಸ್ಯವಾಗಿರುತ್ತೆ' ಎಂದು ಸುಮ್ಮನಾದಳು.
ಆದರೆ ಹೊತ್ತು ಕಳೆದಂತೆ, ಆ ಮೂರು ದಿನ ಇದ್ದ ಸಮಾಧಾನ ಮಾಯ
ವಾಯಿತು. ಭಾವನ ಸಂಸಾರದ ಬದಲು ಬೇರೆ ಯಾರಾದರೂ ಬಳಗ ಬಂದಿದ್ದರೆ?
ತನ್ನ ಕಡೆಯವರೇ ಯಾರಾದರೂ ಬಂದು ಬಿಟ್ಟಿದ್ದರೆ? ಆಗ ಎಷ್ಟು ಸಪ್ಪಗಾಗುತ್ತಿರ
ಲಿಲ್ಲ ತನ್ನ ಮುಖ! ಮನೆಯೊಡತಿಯಾದ ತನಗೆ ಆಗ ಎಂತಹ ಅವಮಾನವಾಗು
ತ್ತಿತ್ತು! ಆಗ ಸತ್ಯವಾಗುತ್ತಿತ್ತು, ರಾಧಮ್ಮ ಹೇಳಿದ 'ಪರಮಾತ್ಮನಿಗೇ ಪ್ರೀತಿಯಮ್ಮ