ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

133

ನಿಮ್ಮ ಅವಸ್ಥೆ' ಎ೦ಬ ಮಾತು....
ಬಾಣಂತಿತನಕ್ಕೆಂದು ತವರುಮನೆಗೆ ಹೋದಂದಿನಿಂದ ಈ ವರೆಗೆ—ಈ ಹದಿ
ನಾರು ಹದಿನೆಂಟು ತಿಂಗಳ ಕಾಲ-ತಾನು ಅನುಭವಿಸಿದುದನ್ನೆಲ್ಲ ಊಹಿಸಿದರೇ ಸಾಕು,
ಮೈ ಜುಮ್ಮೆನ್ನಬೇಕು ಯಾರಿಗಾದರೂ. ಮೊದಮೊದಲು ಆಕೆಗೆ ಅದೆಲ್ಲ ಬಹಳ ಕಷ್ಟ
ವಾಗಿತ್ತು. ಹೃದಯ ಒಡೆದು ಹೋಗುವುದೇನೋ, ತಾನು ಕುಸಿದು ಬೀಳುವೆನೇನೋ,
ಹಾಗೆಯೇ ಗತಪ್ರಾಣಳಾಗುವೆನೇನೋ ಎನಿಸಿತ್ತು.
ಆದರೆ ಈಗ ಪರಿಸ್ಥಿತಿ ಹಾಗಿರಲಿಲ್ಲ. ಐದು ವರ್ಷಗಳಲ್ಲ-ಹತ್ತು ವರ್ಷ ಕಳೆದು
ಹೋದುವೇನೋ ಎನ್ನುವಷ್ಟು ಘಟನೆಗಳು, ಆ ಕಾಲಾವಧಿಯಲ್ಲಿ ಸಂಭವಿಸಿದ್ದುವು.
ಎಲ್ಲದರ ಪರಿಣಾಮವಾಗಿ, ದೇಹವಲ್ಲದೆ ಹೋದರೂ ಆಕೆಯ ಹೃದಯ ಈಗ ಹೆಚ್ಚು
ಗಟ್ಟಿಯಾಗಿತ್ತು. ನೂರು ತೂತುಗಳಾಗಿದ್ದರೂ ಅದು ಭದ್ರವಾಗಿತ್ತು.
ಈಗೀಗ ಅಳುತ್ತಿರಲಿಲ್ಲ ಸುನಂದಾ. ಕಂಬನಿ ಒಸರಿದರೆ ತಾನೇ ಅಳು?
"ಯಾಕ್ರೀ ಕಣ್ಣು ಕೆಂಪಾಗಿದೆ?"
—ಎಂದು ರಾಧಮ್ಮ ಕೇಳಿದಾಗ ಸುನಂದಾ ಈಗ ಧೈರ್ಯವಾಗಿ ಉತ್ತರ
ಕೊಡುತಿದ್ದಳು.
"ಒಲೆ ಬುಡದಲ್ಲಿ ಕೂತು ಹಾಗಾಗಿದೆ ಕಣ್ರೀ."
"ಸುಳ್ಳು!"
"ನಿಮ್ಮಾಣೆ, ಅಳ್ತಾ ಇದ್ದೇಂತ ತಿಳಿದಿರೇನು? ಇಲ್ಲ. ನಾನೀಗ ಅಳೋದಿಲ್ಲ
ರಾಧಮ್ಮ. ಇನ್ನೂ ಸ್ವಲ್ಪ ದಿವಸ ಹೋಗ್ಲಿ. ಅಳೋದು ಹ್ಯಾಗೆ ಅನ್ನೋದೇ ನನಗೆ
ಮರೆತ್ಹೋಗುತ್ತೆ. ನೋಡಿ ಬೇಕಾದರೆ."
ಪ್ರತಿ ಸಲವೂ ಹೆಚ್ಚು ಕಡಮೆ ಇದೇ ರೀತಿಯ ಉತ್ತರ. ಕ್ರಮೇಣ ರಾಧಮ್ಮ
ಅದನ್ನು ನಂಬಿದರು. ಪರಿಣಾಮವಾಗಿ ಸುನಂದೆಯ ಬಗೆಗೆ ಅವರ ಗೌರವ
ಹೆಚ್ಚಾಯಿತು.
ಇನ್ನು ಕುಸುಮಾ. ಆಕೆಯೊಡನೆ ಸುನಂದೆಗಿದ್ದುದು ಒಂದು ರೀತಿಯ ಬೌದ್ಧಿಕ
ಸ್ನೇಹ. ರಾಧಮ್ಮ ತೋರುತ್ತಿದ್ದ ಆತ್ಮೀಯವಾದ 'ಅಕ್ಕತನ'ಕ್ಕಿಂತ ಭಿನ್ನವಾದುದು.
ಲೋಕವೆಲ್ಲ ಬರಡು ಭೂಮಿಯಲ್ಲ, ಅಲ್ಲಿ ಇಲ್ಲಿ ಸುಂದರವಾದ ಪುಷ್ಕರಿಣಿಗಳಿವೆ, ತಿಳಿ
ವಳಿಕೆಯುಳ್ಳ ಮಾನವರಿದ್ದಾರೆ-ಎಂಬುದನ್ನು ಕುಸುಮಳ ಸಹವಾಸದಲ್ಲಿ ತಿಳಿದಾಗ
ಎಷ್ಟೊಂದು ಸಂತೋಷವಾಗಿತ್ತು ಸುನಂದೆಗೆ!
ಕಳೆದ ಮೂರು ದಿನಗಳು ಮೂರು ನಿಮಿಷಗಳ ಹಾಗೆ ಕರಗಿ ಹೋಗಿದ್ದುವು.
ಆಕೆಗೆ ಗೊತ್ತಿತ್ತು: ಇನ್ನು ಮುಂದಿನ ಒಂದೊಂದು ದಿನವೂ ಒಂದೊಂದು ಯುಗವೇ.

****

ಟಕ್‍ ಟ‍ಕ್—ಡಬ್—"ಬಾಗಿಲು!"
ತೂಕಡಿಸುತಿದ್ದ ಸುನಂದೆಗೆ ಎಚ್ಚರವಾಯಿತು.