ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

135

ಯಲ್ಲಾ ಗಲಿಜಾಗ್ಹೋಯ್ತು"
—ಎಂದಳು ಸುನಂದಾ ಶಾಂತ ಸ್ವರದಲ್ಲಿ.
ತಟಕ್ಕನೆ ಎದ್ದು ನಿಂತ ಪುಟ್ಟಣ್ಣ, ಆಕೆಯ ಕತ್ತಿಗೇ ಗುದ್ದಬೇಕೆಂದು ಬಗೆದ.
ಕ್ಷಣ ಹೊತ್ತು ಹಾಗಿದ್ದು ಮುಷ್ಟಿ ಸಡಿಲಿಸಿ, ಕೈತೊಳೆದುಕೊಂಡು ನೇರವಾಗಿ ಕೊಠಡಿಗೆ
ಹೋಗಿ, ದೀಪವಾರಿಸಿ ಮಲಗಿದ.
ಸುನಂದಾ ನಿಧಾನವಾಗಿ ಊಟದ ಮನೆಯನ್ನು ಸ್ವಚ್ಛ ಮಾಡಿದಳು. ತಾನೂ
ಉಣ್ಣಲಿಲ್ಲ. ಹಾಲಿಗೆ ಹೆಪ್ಪು ಹಾಕಿ ಉಳಿದ ಮಜ್ಜಿಗೆಯನ್ನು ಕುಡಿದಳು. ಒಂದು
ಲೋಟ ನೀರನ್ನೊಯ್ದು ಪುಟ್ಟಣ್ಣ ಮಲಗಿದ್ದ ಕೊಠಡಿಯಲ್ಲಿಟ್ಟು ಬಂದಳು. ಆತನಿಗೆ
ನಿದ್ದೆ ಬಂದಿರಲಿಲ್ಲವೆಂಬುದು ಗೊತ್ತಿದ್ದರೂ ಆಕೆ ಮಾತನಾಡಿಸಲಿಲ್ಲ.
ಹಜಾರದಲ್ಲಿ ಸುನಂದಾ ತನ್ನ ಹಾಸಿಗೆ ಬಿಡಿಸಿದಳು. ತೊಟ್ಟಿಲಿನಿಂದ ಮಗು
ವನ್ನೆತ್ತಿ ಹಾಸಿಗೆಯ ಮೇಲೆಯೇ ಮಲಗಿಸಿದಳು. ಸೆಕೆ ಆಗಲೆ ಆರಂಭವಾಗಿತ್ತು.
ಕಿಟಿಕಿ ತೆರೆದಿಟ್ಟು ದೀಪವಾರಿಸಿ ತಾನೂ ಮಲಗಿದಳು.
ನಿದ್ದೆ ಹೋಗಿದ್ದ ಮಗುವನ್ನು ಪ್ರೀತಿಯಿಂದ ಮುಟ್ಟುತ್ತ ಸುನಂದಾ ಅಂದು
ಕೊಂಡಳು:
'ನಾನಿನ್ನು ಸೋಲುವುದಿಲ್ಲ; ಖಂಡಿತ ಸೋಲುವುದಿಲ್ಲ.'


೨೨

ಕುಸುಮಾಳ ತಾಯಿತಂದೆ ಬಂದು, ಮಗಳನ್ನು ಬಾಣಂತಿತನಕ್ಕಾಗಿ ಊರಿಗೆ ಕರೆ
ದೊಯ್ದರು. ತಾನಿಲ್ಲದಿದ್ದರೂ ಮನೆಗೆ ಬರುತ್ತಿರಬೇಕೆಂದು, ಪುಸ್ತಕ ಪತ್ರಿಕೆಗಳನ್ನು
ಒಯ್ಯುತ್ತಿರಬೇಕೆಂದು, ಕುಸುಮಾ ಹೇಳಿದ್ದಳು. ಆದರೆ ಸುನಂದೆಯಿಂದ ಅದು ಸಾಧ್ಯ
ವಾಗಲಿಲ್ಲ. ಸುನಂದೆಯ ಬದಲು, ಆಮನೆಯನ್ನು ದಿನ ನಿತ್ಯ ಸಂದರ್ಶಿಸುತಿದ್ದವಳು
ಸರಸ್ವತಿ. ಕುಸುಮಳ ಅತ್ತೆಯೂ ಮಾವನೂ ಕೆಲಸದ ಹುಡುಗಿಯನ್ನು ಕಳುಹಿಸಿ,
ಸರಸ್ವತಿಯನ್ನು ಕರೆಸಿಕೊಳ್ಳುತ್ತಿದ್ದರು.
“ಎಲ್ಲಿಗೆ ಹೋಗಿದ್ಯೆ?”
—ಎಂದು ಮನೆಗೆ ಮರಳಿದ ಮಗಳನ್ನು ತಾಯಿ ಕೇಳಿದರೆ, ಮಗಳು ಆ ಮನೆ
ಯತ್ತ ಬೊಟ್ಟು ಮಾಡಿ ತೊದಲುತಿದ್ದಳು:
“ತಾತಾ.”
....ಈ ದಿನವೂ ಸರಸ್ವತಿ ಮನೆಯಲ್ಲಿರಲಿಲ್ಲ. ಮಧ್ಯಾಹ್ನ ಆಗಲೆ ಬಿಸಿಲೇರಿತ್ತು.