ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

136

ಕನಸು

ಎಲ್ಲ ಕೆಲಸವೂ ಮುಗಿದು, ಇನ್ನು ಬೀದಿಯ ಕಡೆ ಹೋಗಿ ಮಗಳನ್ನು ಕರೆಯೋಣ
ವೆಂದು, ಸುನಂದಾ, ಅಡುಗೆಮನೆಯ ಕಿಟಿಕಿ ಮುಚ್ಚಲು ಬಂದಳು.
ಕಿಟಿಕಿಯ ಆಚೆ ನಿವೇಶನ ಬರಿದಾಗಿ ಕಾಣುತಿತ್ತು. ಈಗ ಆ ಜಾಗ, ಶ್ಯಾಮನಿಗೂ
ಆತನ ಗೆಳೆಯರಿಗೂ ಕ್ರಿಕೆಟ್ ಆಟದ ಬಯಲು. ಶ್ಯಾಮ ಶಾಲೆಗೆ ಹೋಗತೊಡಗಿದ್ದ
ನಾದರೂ ಶಾಲೆಯ ಹೊರಗಿನ ಪ್ರತಿ ನಿಮಿಷವನ್ನೂ ಆ ಬಯಲಲ್ಲೆ ಕಳೆಯುತ್ತಿದ್ದ.
ಅಲ್ಲಿ ಈಗ ಹಳೆಯ ಹರುಕು ಗುಡಿಸಲಿರಲಿಲ್ಲ. ಆ ಹೆಂಗಸು ಮಗುವನ್ನೆತ್ತಿಕೊಂಡು
ಹೊರಟುಹೋದ ಮೇಲೆ ಆ ಜಾಗದ ಒಡೆಯರಾದ ನಾಗೇಂದ್ರಪ್ಪನವರು ಬಂದು ಆ
ಗಂಡಸಿಗೆ “ಇನ್ನು ಕಂಬಿ ಕೀಳಪ್ಪ” ಎಂದಿದ್ದರು. ಒಂದು ಮುಂಜಾನೆ ಆತ ಅಲ್ಲಿರ
ಲಿಲ್ಲ. ಎಲ್ಲಿಗೋ ಎದ್ದುಬಿಟ್ಟಿದ್ದ. ಮನೆ ಬದಲಾಯಿಸಿದೆ, ಎಂದು ಹೊಸ ವಿಳಾಸ
ಕೊಟ್ಟುಹೋಗುವ ಅಗತ್ಯವಾದರೂ ಆತನಿಗೇನಿತ್ತು? ಆತ ಹೋದುದನ್ನು ಖಚಿತ
ಮಾಡಿಕೊಂಡು ಶ್ಯಾಮ, ಆ ಜಾಗವೀಗ ತನ್ನ ಅಧೀನಕ್ಕೆ ಬಂದಿದೆಯೆಂದು ತನ್ನ ಸ್ನೇಹಿ
ತರಿಗೆಲ್ಲ ಸುದ್ದಿ ಮುಟ್ಟಿಸಿದ. ನಗೆ ಗದ್ದಲ ಕೋಲಾಹಲಗಳ ನಡುವೆ ಗುಡಿಸಲು ನೆಲ
ಸಮವಾಯಿತು. ಹುಡುಗರೆಲ್ಲ ಕಳೆಕಿತ್ತು ನೆಲವನ್ನು ಸಮಮಾಡಿದರು. ಬಿಸಿಲು
ಬಂದು ಹಸುರು ಗರಿಕೆಗಳಿಗೆ ಕುಠಾರವಾಯಿತು.
“ಚೆನ್ನಾಗಿ ಆಡಿ. ನಾಗೇಂದ್ರಪ್ಪನವರು ಮನೆ ಕಟ್ಟಿಸೋ ಹೊತ್ತಿಗೆ ನೆಲ ಸ್ವಚ್ಛ
ವಾಗಿರ್ಲಿ"
—ಎಂದು ರಾಧಮ್ಮ ಆ ದಿನ ನಗುತ್ತ ಹೇಳಿದರು.
ಈಗ ಆ ಜಾಗದಿಂದ ಹೊರಟು ಕಿಟಿಕಿಯ ಎಡೆಯಿಂದ ಒಳಕ್ಕೆ ತೂರುತಿದ್ದ
ಸದ್ದುಗಳು: 'ಬಾಲ್ ಪ್ಲೀಸ್' 'ಔಟ್' 'ನಾಯ್ಡು' 'ಮಂಕಡ್' ಮರ್ಚೆಂಟ್...
ಸುನಂದೆಗೆ ಆಸಕ್ತಿಯೇ ಇಲ್ಲದ ಸ್ಕೋರುಗಳ ಲೆಕ್ಕಾಚಾರ....
ಹುಡುಗರ ಉತ್ಸಾಹ ಅಂಟು ಜಾಡ್ಯವಾಗಿತ್ತು. ಅವರು ಆಡುತ್ತಿದ್ದರೆ ಸುನಂದಾ
ಕಿಟಿಕಿಯ ಬಳಿ ಬಂದು ನಿಲ್ಲುತ್ತಿದ್ದಳು. ಇಲ್ಲವೆ ಹೊರಗೆ ರಾಧಮ್ಮನೊಡನೆ ಅಂಗಳ
ದಲ್ಲಿರುತ್ತಿದ್ದಳು. ಕ್ರಿಕೆಟ್ ವೀರರು ಬೌಂಡರಿ ಹೊಡೆದು ಚೆಂಡು ತಮ್ಮೆಡೆಗೆ ಬಂದಾಗ
ಶ್ಯಾಮ, “ಅತ್ತೆ, ಬಾಲ್ ಬಾಲ್” ಎಂದಾಗ, ತಾನು ಅದನ್ನೆತ್ತಿ ಬಯಲಿಗೆ ಎಸೆಯು
ತ್ತಿದ್ದಳು.
ಅಂತಹ ಸಂದರ್ಭಗಳಲ್ಲೆಲ್ಲ ಆಕೆಯ ಹೃದಯ ಹಗುರವಾಗುತ್ತಿತ್ತು. ಬದುಕು
ಬೇಸರವೆನಿಸುತ್ತಿರಲಿಲ್ಲ.
ಆದರೂ ಒಮ್ಮೊಮ್ಮೆ ವಿನಾಕಾರಣವಾಗಿ ಮನಸ್ಸು ಮುದುಡಿಕೊಳ್ಳುತ್ತಿತ್ತು.
ಉದಾಹರಣೆಗೆ ಈಗ. ಹುಡುಗರಿಲ್ಲದ ಬರಿ ಬಯಲನ್ನು ನೋಡುತ್ತಿದ್ದರೆ ಆಕೆಗೇನೋ
ಬೇಜಾರು. ಅಥವಾ ಯಾವುದೋ ನೆನಪಾದಾಗ. ಅಂಥ ಹೊತ್ತಿನಲ್ಲಿ ಸುನಂದಾ
ಅಂತರ್ಮುಖಿಯಾಗುತ್ತಿದ್ದಳು. ತಾನು ದುಃಖನಿ, ಚಿರದುಃಖಿನಿ, ತನ್ನಷ್ಟು ನರಳು
ತ್ತಿರುವವರು ಈ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ—ಎನಿಸುತ್ತಿತ್ತು. ಮತ್ತೆ