ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

139

ಹೊರಟು ನಿಂತಾಗ ಸುನಂದಾ ಕೇಳಿದಳು:
“ಮದುವೆಗಾದರೂ ಬರ್ತೀರಿ ತಾನೆ?”
“ಬರೋದಿಲ್ಲ”
—ಎಂದು ಪುಟ್ಟಣ್ಣ ನಿರೀಕ್ಷಿತ ಉತ್ತರವನ್ನೇ ಕೊಟ್ಟ.
“ಆ ಮೇಲೆ ನನ್ನನ್ನು ಕರಕೊಂಡು ಬರೋದಕ್ಕಾದರೂ ಬರ್ತೀರಾ?”
“ಯಾಕೆ? ಈಗ ಹ್ಯಾಗೆ ಹೊರಟಿದೀಯೋ ಹಾಗೇ ಬಂದ್ಬಿಡು.”
“ಅಪ್ಪಣೆ!”

****

ತಾಯಿಮನೆಯಲ್ಲಿ, ಸುನಂದೆ ಮಗುವಿನೊಡನೆ ಬಂದಳೆಂದು ಎಲ್ಲರಿಗೂ ಸಂತೋ
ಷವಾಯಿತು. ಆಕೆ ಗಂಡನೊಡನೆ ನಡೆಸುತ್ತಿದ್ದ ಸುಖದ ಬಾಳ್ವೆಯ ವಿಷಯ ಯಾರೂ
ಏನನ್ನೂ ಕೇಳಲಿಲ್ಲ. ಸರಸ್ವತಿಯನ್ನು ಮುದ್ದಿಸಿ ಮುದ್ದಿಸಿ ಎಲ್ಲರೂ ಕುಣಿದಾಡಿದರು.
ಸೊರಗಿದ್ದ ಹಿರಿಯ ಮಗಳನ್ನು ಕಂಡು ತಾಯಿ ಹೇಳಿದರು:
“ಬಂದವಳು ಒಂದಷ್ಟು ದಿನ ಹಾಯಾಗಿದ್ದು ಹೋಗು. ಮದುವೆ ಮುಗಿದ
ತಕ್ಷಣ ಓಡ್ಬೇಡ.”
ಸುನಂದಾ ನಕ್ಕು ಉತ್ತರ ಕೊಡದೆ ಸುಮ್ಮನಾದಳು.
ಅಕ್ಕನ ಗೋಳಿನ ಕಥೆಯೆಲ್ಲ ವಿಜಯಾಗೆ ತಿಳಿದಿತ್ತು. ಆಕೆಯ ದೃಷ್ಟಿಯಲ್ಲಿ
ಸುನಂದಾ, ರಣರಂಗದಿಂದ ಗಾಯಗೊಂಡಿದ್ದರೂ ಬದುಕಿ ಬಂದಿದ್ದ ವೀರ ಯೋಧೆ.
ಸುನಂದಾ ಬಂದ ಕ್ಷಣದಿಂದ ಅವರಿಬ್ಬರೂ ಜೊತೆಯಾಗಿಯೇ ಉಳಿದರು.
ಮದುವೆಯಾಗಿ ಗಂಡನ ಮನೆಗೆ ಹೋಗಲಿದ್ದ ತಂಗಿಯೊಡನೆ, ತನ್ನ ಗಂಡನ
ಜೊತೆಯಲ್ಲಿ ತಾನು ಅನುಭವಿಸಿದ ಸುಖದ ಕಥೆಯನ್ನು ಸುನಂದಾ ಹೇಳಲಿಲ್ಲ. ಆದರೆ,
ಬದುಕು ಕಲ್ಪನೆಗಿಂತಲೂ ಎಷ್ಟೋ ಪಾಲು ಗಭೀರತರವಾಗಿದೆ ಎಂಬುದನ್ನು, ಮೃದು
ಮಾತುಗಳಲ್ಲಿ ತಿಳಿಯಹೇಳಿದಳು.
ಅಕ್ಕ ತಂಗಿಯನ್ನು ಕೇಳಿದಳು:
“ವರ ನಿನಗೆ ಮೆಚ್ಚುಗೆಯಾಗಿದಾನಾ ವಿಜಯಾ?”
“ನನಗೆ ಗೊತ್ತಿಲ್ಲವಕ್ಕ. ನಿರಾಶೆ ಅನುಭವಿಸಿ ಅನುಭವಿಸಿ ತಂದೆ ಕೊನೆಗೆ ಈ
ವರ ಗೊತ್ಮಾಡಿದಾರೆ. ಇಂಥಾದ್ದರಲ್ಲಿ ನನ್ನ ಕರ್ತವ್ಯ ಏನು ಹೇಳು?”
ಸುನಂದೆಯ ಉಸಿರು ಕಟ್ಟಿತು.
“ಮುದುಕನೇನೂ ಅಲ್ವಲ್ಲ ಸದ್ಯಃ!”
“ಅಲ್ಲ. ಬೇಗನೆ ವಿಧವೆಯಾಗೋ ಭಯವೇನೂ ಇಲ್ಲ.”
ಸುನಂದಾ ತನ್ನ ಅಂಗೈಯಿಂದ ತಂಗಿಯ ಬಾಯಿಮುಚ್ಚಿದಳು. ಆ ಬಳಿಕ
ಸ್ವಲ್ಪ ತಡೆದು ಆಕೆಯೆಂದಳು:
“ನೋಡೋಕೆ ಚೆನ್ನಾಗಿದಾನೊ?”