ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

141

ನಾವಿಬ್ಬರೂ ಜತೆಯಾಗಿಯೇ ಇದ್ದು ಬಿಡೋಣ-ಏನಂತಿಯಾ?”
ಆ ಮಾತು ಕೇಳಿ ಸುನಂದಾ ತಂಗಿಯನ್ನು ತನ್ನ ಬಾಹುಗಳಿಂದ ಬಳಸುತ್ತ
ಅಂದಳು:
“ನನ್ನ ವಿಜೀ! ನನಗೇನೂ ಬುದ್ಧಿ ಇಲ್ಲ. ಅಂಥ ಮಾತೆಲ್ಲ ಯಾಕಾದರೂ
ಆಡ್ತೀನೋ? ನೋಡ್ತಿರು ಬೇಕಾದರೆ. ನಿನ್ನ ಗಂಡ ಖಂಡಿತ ಒಳ್ಳೆಯವನಾಗಿರ್ತಾನೆ.
ನಿನ್ನನ್ನ ದೇವರ ಹಾಗೆ ನೋಡ್ಕೋತಾನೆ. ನನ್ನ ಮಾತು ಸುಳ್ಳಾದರೆ ಆಮೇಲೆ
ಹೇಳು."
ವಿಜಯಾ ನಕ್ಕಳು. ತನ್ನನ್ನು ಸುತ್ತುವರಿದಿದ್ದ ಅಕ್ಕನ ಬಾಹುಗಳನ್ನು ಬಿಡಿ
ಸುತ್ತ ಅಂದಳು:
“ನೋಯುತ್ತೆ, ಬಿಡು!”

****

ಅವರ ಮನೆಯಲ್ಲಿ ಇನ್ನೂ ಮದುವೆಯಾಗಬೇಕಾದ ಹೆಣ್ಣು ಬೇರೆ ಇರಲಿಲ್ಲ.
ಆ ಕಾರಣದಿಂದ, ವಿಜಯಳ ಮದುವೆಯನ್ನು ಸಾಲ ಇತ್ಯಾದಿಗಳ ಸಹಾಯದಿಂದ ತಕ
ಮಟ್ಟಿನ ವಿಜೃಂಭಣೆಯಿಂದಲೆ ಆಕೆಯ ತಂದೆ ನೆರವೇರಿಸಿದರು.
ವರನ ಕಡೆಯವರು ಒಳ್ಳೆಯವರೇ ಆಗಿದ್ದರು. ವಧುವಿನ ಊರಿಗೆ ಬಂದು
ಮದುವೆ ಜರಗುವವರೆಗೂ ಯಾವ ರೀತಿ ಜಗಳವನ್ನೂ ಅವರು ಆಡಲಿಲ್ಲ. ಮುಂದಾ
ದರೂ ಅವರು ಗೊಂದಲವೆಬ್ಬಿಸಬಹುದೆನ್ನುವುದಕ್ಕೆ ಯಾವ ಲಕ್ಷಣವೂ ಇರಲಿಲ್ಲ.
ಮದುವೆಯ ಕಾಲದಲ್ಲಿ ಸುನಂದೆಯ ಗಂಡ ಕಾಣಿಸಲಿಲ್ಲವೆಂದು, ಆ ಬಗೆಗೆ
ಪ್ರಸ್ತಾಪ ಬಂತು.
“ಎಲ್ಲಿ, ನಿಮ್ಮ ಮೊದಲ್ನೆ ಅಳಿಯ-ಕಾಣ್ಲಿಲ್ವಲ್ಲ?”
—ಎಂದು ಕನ್ಯಾಪಿತೃವನ್ನು ಆ ಸಂದರ್ಭದಲ್ಲಿ ಊರಿನ ಕೆಲವರು ಕೇಳಿದರು.
ಅವರಿಗೆಲ್ಲಾ ಸುನಂದೆಯ ತಂದೆ ಉತ್ತರ ಕೊಟ್ಟರು:
“ನಿನ್ನೆ ತಾನೇ ಟೆಲಿಗ್ರಾಂ ಬಂತು. ಅದೇನೋ ಅರ್ಜೆಂಟ್ ಕೆಲಸದಿಂದಾಗಿ
ಹೊರಡೋಕೆ ಆಗೋದಿಲ್ಲಾಂತ. ಹೀಗೂ ಒಮ್ಮೊಮ್ಮೆ ಆಗುತ್ತೆ ನೋಡಿ.”
ಸುನಂದಾ, ಕಹಿ ನೆನಪುಗಳನ್ನೆಲ್ಲ ಹೃದಯದ ಆಳದಲ್ಲಿ ಹೂತಿಟ್ಟು, ಸರಸ್ವತಿ
ಯನ್ನು ಹೊತ್ತುಕೊಂಡು ಸಂಭ್ರಮದಿಂದ ತಂಗಿಯ ಮದುವೆಯಲ್ಲಿ ಓಡಾಡಿದಳು.
ಮದುವೆಗೆ ಬಂದಿದ್ದ ಸುನಂದೆಯ ಓರಗೆಯವರೆಲ್ಲ ಆಕೆಯನ್ನು ಕುರಿತು ತಮ್ಮೊ
ಳಗೆ ಪಿಸು ಧ್ವನಿಯಲ್ಲಿ ಮಾತನಾಡಿಕೊಂಡರು.
“ಎಷ್ಟೊಂದು ಖುಷಿಯಾಗಿದ್ದಾಳೆ ಸುನಂದಾ!”
“ಅವಳಿಗೇನಮ್ಮಾ ಕಡಿಮೆ?”
“ಮಗು ತುಂಬಾ ಮುದ್ದಾಗಿದೆ, ಅಲ್ವಾ?”
“ಆಕೆ ಉಟ್ಟಿರೋ ರೇಷ್ಮೆ ಸೀರೆ ಖಂಡಿತಾ ಭಾರೀ ಬೆಲೇದು ಕಣ್ರೀ.”