ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



12

ಕನಸು

ಅಮ್ಮನಿಗೆ ವರದಿ ಮಾಡುತ್ತಿದ್ದ. ಏನಾದರೂ ತಿಂಡಿ ತಿನ್ನಬೇಕೆಂದು ಆಸೆಯಾದರೂ
ಅಮ್ಮನಿಗೇ ಅರ್ಜಿ. ಷರಾಯಿ ಗುಂಡಿ ಹೋಗಿದ್ದರೂ ಅಮ್ಮನಿಗೇ ಶರಣು.
ಇದನ್ನೆಲ್ಲ ಕಂಡು ಸುನಂದಾಗೆ ಬೇಸರವಾಗುತ್ತಿತ್ತು. ಒಮ್ಮೆ ಗಂಡನನ್ನು ಕೆರಳಿಸ
ಬೇಕೆಂದು ಒಂದು ಕಥೆ ಕಟ್ಟಿ ಆಕೆ ಹೀಗೆ ಹೇಳಿದಳು:
"ಇವತ್ತಿನ ದಿವಸ ಯಾರೋ ಬಂದು ಈ ಮನೇಲಿ ಎಷ್ಟು ಜನ ಇದಾರೇಂತ
ಕೇಳಿದರೂಂದ್ರೆ."
"ಸೆನ್ಸಸ್ನವರೋ ಏನೋ"
"ಇದ್ದರೂ ಇರಬಹುದು."
"ಏನಂದಳು ಅಮ್ಮ?"
ಸುನಂದೆಗೆ ನಗುಬಂದಿತ್ತು. ಅಷ್ಟರಲ್ಲೇ ಬೇಸ್ತು ಬಿದ್ದಿದ್ದ ಆ ಗಂಡ!
"ಅತ್ತೆ ಬಚ್ಚಲು ಮನೇಲಿದ್ರು. ನಾನೇ ಉತ್ತರ ಕೊಟ್ಟೆ."
“ಏನೂಂತ?"
"ಮೂವರೂಂತ. ನಾನು, ನಮ್ಮತ್ತೆ ಮತ್ತು ಕೂಸು ಅಂತ."
“ಏನೂ? ಕೂಸೆ? ಯಾವ ಕೂಸು ?"
"ಪುಟ್ಟಕೂಸು. ಇನ್ಯಾವುದು? ನೀವೇ!"
“ಏನಂದೆ?”
"ನಿಮ್ಮಮ್ಮನಿಗೆ ನೀವು ಕೂಸಲ್ಲವೇನೋ?"
“ಸುನಂದಾ!”
ಆ ಸ್ವರ ಕೇಳಿ ಒಮ್ಮೆಲೆ ಆಕೆ ಬೆಚ್ಚಿ ಬಿದ್ದಿದ್ದಳು.
ತಾನು ಆಡಿದ್ದು ಅತಿಯಾಯಿತೇನೋ ಎಂದು ಅವಳಿಗೆ ಭಯವಾಯಿತು.
ಸ್ವರವಡಗಿ ಗಂಟಲೊಣಗಿ ಆಕೆ ಮೌನವಾದಳು.
ಆ ಪ್ರಕರಣದ ಬಳಿಕ ಒಂದು ದಿನವೆಲ್ಲ ಗಂಡ ಆಕೆಯೊಡನೆ ಮಾತು ಬಿಟ್ಟಿದ್ದ.
ಕಣ್ಣೀರಿಟ್ಟು ಕ್ಷಮೆ ಕೇಳಬೇಕೆಂದು ಸುನಂದಾ ಯೋಚಿಸಿದಳು. ಆದರೆ ಅಷ್ಟರಲ್ಲೇ,
ಆ ಘಟನೆ ನಡೆದುದರ ನೆನಪೂ ಇಲ್ಲವೆಂಬಂತೆ, ಆತನೇ ಮಾತನಾಡತೊಡಗಿದ....
....ಅದು ಅತ್ತೆ ಬದುಕಿದ್ದಾಗಿನ ಮಾತು.
ಅನಂತರ ಒಮ್ಮೆಲೆ ಪರಿಸ್ಥಿತಿ ಬದಲಾಯಿತು. ಬಹಳ ಕಾಲದ ಬಾಕಿಯನ್ನೆಲ್ಲ
ಸಂದಾಯ ಮಾಡುವವನಂತೆ ಪುಟ್ಟಣ್ಣ ಸುನಂದೆಯನ್ನು ಪ್ರೀತಿಸಿದ. ಅವರು ವಾಯು
ಸೇವನೆಗೆ ಹೋಗಲಿಲ್ಲ. ಆದರೆ ಸಿನಿಮಾ ಮಂದಿರಗಳಿಗೆ ಎಡೆಬಿಡದೆ ಭೇಟಿಕೊಟ್ಟರು.
ಒಳ್ಳೆಯ ಸೀರೆಗಳು ಸಣ್ಣಪುಟ್ಟ ಆಭರಣಗಳು ಮನೆಗೆ ಬಂದುವು.
ಸುನಂದಾ ತಾಯಿಯಾಗುವ ಲಕ್ಷಣಗಳು ಕಾಣಿಸಿಕೊಂಡುವು.
ಅಷ್ಟರವರೆಗೂ ಹೊಸ ಹುರುಪಿನಿಂದ ವರ್ತಿಸುತ್ತಿದ್ದ ಪುಟ್ಟಣ್ಣ ಆಗ ಒಮ್ಮೆಲೆ
ಅಧೀರನಾದುದನ್ನು ಸುನಂದಾ ಗಮನಿಸಿದಳು.