ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

13

ಆಕೆ ಕೇಳಿದ್ದಳು:
“ನಿಮಗೆ ಸಂತೋಷ ಆಗಲ್ವಾ? ಯಾಕೆ ಸಪ್ಪಗಿದೀರ?”
“ಎಲ್ಲಿ ಸಪ್ಪಗಿದೀನಿ?”
ಅಳು ತುಂಬಿದ ಕಣ್ಣುಗಳಿಂದ ಕೈ ಹಿಡಿದವನನ್ನು ನೋಡುತ್ತ ಸುನಂದಾ
ಅಂದಿದ್ದಳು:
“ಮಗು ಅಂದರೆ ಇಷ್ಟ ಇಲ್ವಾ ನಿಮಗೆ?”
“ಯಾರು ಇಷ್ಟವಿಲ್ಲ ಅಂದೋರು?”
ಉತ್ತರ ರೂಪವಾಗಿ ಬಂದ ಪ್ರಶ್ನೆಗಳ ಸ್ವರ ಗಡಸಾಗಿತ್ತು.
ಅದು ಆಕೆಯ ಮನಸ್ಸಿನ ಮೇಲೆ ಮೂಡಿ ಮಾಯದೇ ಉಳಿದ ಮೊದಲ
ಗಾಯ.
ಆ ಬಳಿಕ ಅನಿವಾರ್ಯವಾಗಿ ಅವರಿಬ್ಬರ ನಡುವೆ ಬಂದು ನಿಂತ ನೈಸರ್ಗಿಕ
ಸ್ಥಿತ್ಯಂತರ...

ಸುನಂದೆಯ ತಂದೆ ಬಂದು, ತಮ್ಮ ಸ್ವಂತದ ಕಷ್ಟಗಳೊಂದನ್ನೂ ಲೆಕ್ಕಿಸದೆ,
ಮಗಳನ್ನು ಮೊದಲ ಬಾಣಂತಿತನಕ್ಕಾಗಿ ತಮ್ಮ ಊರಿಗೇ ಕರೆದೊಯ್ದರು. ಅಲ್ಲಿಯೇ
ಹೆರಿಗೆಯಾಯಿತು....

****

ಅಡುಗೆ ಮನೆಯಲ್ಲಿ ಸದ್ದಾಯಿತೆಂದು ಸುನಂದಾ ಧಡಕ್ಕನೆದ್ದು 'ಬೆಕ್ಕು!' ಎಂದು
ಕೂಗುತ್ತ ಒಳಕ್ಕೆ ಓಡಿದಳು.
ಕಳ್ಳಬೆಕ್ಕು ಅನ್ನದ ತಪ್ಪಲೆಯ ಮುಚ್ಚಳವನ್ನು ಕೆಳಕ್ಕೆ ತಳ್ಳಿತ್ತು. ಸುನಂದಾ
ಬೆಕ್ಕನ್ನೋಡಿಸಿ, ಮತ್ತೆ ತಪ್ಪಲೆಯನ್ನು ಮುಚ್ಚಿಟ್ಟು, ಅಡುಗೆ ಮನೆಯ ಬಾಗಿಲೆಳೆದು
ಕೊಂಡು ಒಳ ಹಜಾರಕ್ಕೆ ಬಂದಳು.
ಅಂಗೈಗಳನ್ನು ಮುಷ್ಟಿ ಬಿಗಿದು ತೊಟ್ಟಿಲಲ್ಲಿ ಮಗು ಮಲಗಿತ್ತು. ಅದರ ಮೇಲು
ಹೊದಿಕೆಯ ಮೇಲೆ ಕೈಯಾಡಿಸಿ ಸುನಂದಾ ತೊಟ್ಟಿಲ ಮಗ್ಗುಲಲ್ಲೇ ತನ್ನ ಹಾಸಿಗೆ
ಬಿಡಿಸಿ, ಅದರ ಮೇಲೆ ಅಡ್ಡಾದಳು.

'ನಿದ್ದೆ ಬಂದರೆ ಕಷ್ಟ' ಎಂದುಕೊಂಡಳು ಸುನಂದಾ. ಆದರೆ, ಹಾಗೆಲ್ಲ ನಿದ್ದೆ ಬರುವ
ಪ್ರಮೇಯವೇ ಇರಲಿಲ್ಲ. ಯಾವ ಕಾಲಕ್ಕೂ ಮುಗಿಯಲಾರವೇನೋ ಎನ್ನುವಷ್ಟು
ಯೋಚನೆಗಳು ಆಕೆಯ ಜತೆಗಿದ್ದುವು.....

****

ಹಿಂದೆ ಹಾಗಿರಲಿಲ್ಲ. ದಿಂಬಿಗೆ ತಲೆ ಸೋಂಕಿದೊಡನೆಯೇ ಆಕೆಗೆ ನಿದ್ದೆ ಬರು
ತಿತ್ತು. “ಎಂಥ ನಿದ್ದೆಯೇ ಇದು?” ಎಂದು ಗಂಡ ಹಲವೊಮ್ಮೆ ಆಕೆಯ ಮೈ
ಕುಲುಕಿ ಎಚ್ಚರಿಸುತ್ತಿದ್ದ-ತನಗೆ ಬೇಕಾದುದನ್ನು ಪಡೆಯುವುದಕ್ಕೋಸ್ಕರ. ಅದು
ಮುಗಿದ ಮೇಲೆ, ಮುಗುಳುನಗೆಯೊಡನೆ ಗಂಡನನ್ನು ತಬ್ಬಿಕೊಂಡೇ ಆಕೆ ಮತ್ತೆ ನಿದ್ದೆ