ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

15

ತಮಾಷೆಗೆ. ಆದರೆ ನಿಜವಾಗಿಯೂ ಮಗು ಅತ್ತಾಗ ಅವಳಿಗೆ ರೇಗಿತ್ತು. “ಮಗೂನ
ಎತ್ಕೊಳ್ಳೋಕೂ ತಿಳೀದು” ಎಂದಿದ್ದಳು. ಕ್ರಮೇಣ ಆತ ಮಗುವಿನ ಸಮೀಪಕ್ಕೆ
ಬರುವುದನ್ನೇ ಕಡಮೆಮಾಡಿದ. “ಒಂದ್ನಿ ಮಿಷ ಮಗೂನ ಎತ್ಕೊಳ್ಳೀಂದ್ರೆ” ಎಂದು
ಸುನಂದಾ ಕೇಳಿದರೆ, “ಬಟ್ಟೆ ಒದ್ದೆಯಾಗುತ್ತೆ, ಗಲೀಜಾಗುತ್ತೆ” ಎಂದು ಉತ್ತರ
ಬರುತ್ತಿತ್ತು.
ಸಂಜೆಯ ಹೊತ್ತು ಮಗುವನ್ನು 'ಪ್ರಾಮ್'ನಲ್ಲಿ ಕುಳ್ಳಿರಿಸಿ ತಳ್ಳಿಕೊಂಡು
ಹೋಗುವ ದಂಪತಿಯನ್ನು ಸುನಂದಾ ಕಂಡಿದ್ದಳು. ಒಂದು ದಿನ ತನ್ನ ಮಗುವನ್ನೂ
ಹೀಗೆಯೇ ಪ್ರಾಮ್‌ನಲ್ಲಿಟ್ಟು ತಳ್ಳಬೇಕೆಂಬ ಆಸೆಯಾಗಿತ್ತು ಅವಳಿಗೆ...
ಸುನಂದಾ ಅಂದುಕೊಂಡಳು:
ಎಲ್ಲಾ ಆಸೆಗಳೇ, ಬರಿಯ ಆಸೆಗಳೇ.
ಮಗುವಿನ ನಾಮಕರಣದ ವಿಷಯದಲ್ಲೂ ಆಸಕ್ತಿ ತೋರಿರಲಿಲ್ಲ ಮಹಾನು
ಭಾವ. ಕಾಗದ ಬರೆದು ಕೇಳಿದ್ದಕ್ಕೆ, “ಏನಾದರೊಂದು ಹೆಸರಿಟ್ಟು ಬಿಡಿ” ಎಂದು
ಮಾವನಿಗೆ ಬರೆದಿದ್ದ.
“ಗಂಡು ಹುಟ್ಟಲಿಲ್ಲವೆಂದು ಅವನಿಗೆ ಬೇಸರವಾಗಿದೆ”
—ಎಂದಿದ್ದರು ಸುನಂದೆಯ ತಾಯಿ, ಅಳಿಯನ ಆ ಅಭಿಪ್ರಾಯ ತಿಳಿದಾಗ.
“ಸುಮ್ಮನಿರಮ್ಮ ನೀನು”
—ಎಂದು ಸುನಂದಾ, ದುಃಖವನ್ನು ತನ್ನೊಳಗೇ ಹತ್ತಿಕ್ಕಿ ಆಗ ಅಂದಿದ್ದಳು.
ವಿದ್ಯಾಪಕ್ಷಪಾತಿಯಾಗಿದ್ದ ಆಕೆಯ ತಂದೆ ಮೊಮ್ಮಗಳಿಗೆ 'ವಿದ್ಯಾ' ಎಂದು
ಹೆಸರಿಡಲು ಬಯಸಿದರು. “ಅದೇನು ಹೆಸರೋ!” ಎಂದು ಸುನಂದೆಯ ತಾಯಿ ಆ
ಹೆಸರನ್ನು 'ಸರಸ್ವತಿ'ಗೆ ಬದಲಾಯಿಸಿದರು.
ಸರಸ್ವತಿ ಮುದ್ದು ಮಗು. ಸಂದೇಹವಿಲ್ಲ. ಸುನಂದೆಗೆ ಚೆನ್ನಾಗಿ ಗೊತ್ತಿತ್ತು.
'ಹೆತ್ತವಳಿಗೆ ಹೆಗ್ಗಣ ಮುದ್ದು' ಎಂಬ ಕಾರಣದಿಂದಲ್ಲ. ನಿಜವಾಗಿಯೂ ಮಗು
ಮುದ್ದಾಗಿದೆ, ದೊಡ್ಡವಳಾದಾಗ ಸರಸ್ವತಿ ಸುಂದರಿಯಾಗುತ್ತಾಳೆ-ಎಂದು ಮಗುವನ್ನು
ನೋಡಿದ ಯಾರಾದರೂ ಹೇಳುವ ಹಾಗಿತ್ತು.
ಆದರೆ ಅವರ ದೃಷ್ಟಿಯಲ್ಲಿ ಆ ಮಗುವಿಗೇನು ಬೆಲೆಯೊ?
ಒಮ್ಮೊಮ್ಮೆ, ಮಗುವನ್ನು ತಾನು ಅತಿಯಾಗಿ ಪ್ರೀತಿಸಿ, ಅವರನ್ನು ಉದಾಸೀನ
ನೋಟದಿಂದ ಕಂಡು, ಈ ವಿರಸಕ್ಕೆ ಕಾರಣಳಾದೆನೆ-ಎಂದು ಸುನಂದೆಗೆ ಅನಿಸುತಿತ್ತು.
ಗಂಡನ ಮನಸ್ಸನ್ನು ತಿಳಿಯಲು ಆಕೆ ಯತ್ನಿಸುತ್ತಿದ್ದಳು. ತಾಯಿ ಇದ್ದಾಗ ಆತ ಆ
ಪ್ರೀತಿಯನ್ನೇ ನೆಚ್ಚಿಕೊಂಡಿದ್ದ. ಆ ಬಳಿಕ ತನ್ನ ಪ್ರೀತಿ ಯಥೇಚ್ಛವಾಗಿ ದೊರೆ
ಯಿತು. ಈಗ ತಾನು ತಾಯಿಯಾದಮೇಲೆ, ತನಗೊಬ್ಬನಿಗೇ ದೊರೆಯಬೇಕಾದ
ಪ್ರೀತಿಯ ಅಭಾವದ ಫಲವಾಗಿ ಆತ ಬದಲಾಗಿರಬಹುದೆ?... ತರ್ಕ ಸ್ವಾರಸ್ಯಕರ
ವಾಗಿತ್ತು, ಆಕರ್ಷಣೀಯವಾಗಿತ್ತು-ಒಪ್ಪಿಬಿಡೋಣವೆ? ಎನ್ನಿಸುವಷ್ಟು. ಆದರೆ