ಪುಟ:ಪಾಲಿಗೆ ಬಂದ ಪಂಚಾಮೃತ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

17

ತಾಯಿಯೂ ಹೇಳುತ್ತಿದ್ದರು:
“ಮಲಕೋಬಾರದಾ?”
ಆಗ ತಂಗಿ ರಾಗವೆಳೆಯುತ್ತಿದ್ದಳು:
“ನಿದ್ದೆ ಬರಲ್ಲಾ....ಊ...."
ತಂದೆ ಸಲಹೆ ಕೊಡುತಿದ್ದರು:
“ಒಂದು ಎರಡು ಮೂರು ಎಣಿಸಿ. ನಿದ್ದೆ ಬರುತ್ತೆ..."
ಒಂದು, ಎರಡು, ಮೂರು...ಹಾಗೆ ನಿದ್ದೆ ಬರುವವರೆಗೂ.
ಒಂದು, ಎರಡು, ಮೂರು....

“ಸುನಂದಾ! ಏ ಸುನಂದಾ!”
ಒಂದು ನಿಮಿಷದಿಂದ ಬಾಗಿಲು ತಟ್ಟುತ್ತಲೇ ಇದ್ದ ಪುಟ್ಟಣ್ಣನಿಗೆ ರೇಗಿ
ಹೋಯಿತು. 'ಮಲಕೊಂಡು ಬಿಟ್ಟಳೂಂತ ಕಾಣುತ್ತೆ' ಎಂದು ಮೆಲ್ಲಗೆ ಗೊಣಗಿ,
ಮತ್ತೊಮ್ಮೆ ಗಟ್ಟಿಯಾಗಿ ಬಾಗಿಲು ಬಡೆದು ಆತ ಕೂಗಿದ:
“ಸುನಂದಾ! ಏ ಸುನಂದಾ!”
ಪಕ್ಕದ ಮನೆಯ ಕಿಟಕಿ ತೆರೆದ ಸದ್ದಾಯಿತು. ಅತ್ತ ನೋಡಿದ, ಪುಟ್ಟಣ್ಣನ
ದೃಷ್ಟಿಗೆ ಮೊದಲು ರಾಧಮ್ಮ ಬಿದ್ದರು_ಬಳಿಕ ಆಕೆಯ ಗಂಡ ರಾಮಯ್ಯ.
ತಡವಾಗಿ ಮನೆಗೆ ಬಂದು ಬಾಗಿಲು ತಟ್ಟುವುದರಲ್ಲಿ ತಪ್ಪಿರಲಿಲ್ಲ. ಆದರೆ
ಪುಟ್ಟಣ್ಣ ಮಾತ್ರ ಅವಮಾನಿತನಂತೆ ಕಸಿವಿಸಿಗೊಂಡ. ಆತ ಕುಡಿದು ಬಂದಿರಲಿಲ್ಲ;
ಸೂಳೆಯ ಮನೆಯಿಂದಲೂ ಬಂದಿರಲಿಲ್ಲ. ಆದರೂ 'ಈ ಹಾಳು ಸುನಂದಾ ಬಾಗಿಲು
ತೆರೆಯದೆ ನೆರೆಮನೆಯವರೆಲ್ಲ ನೋಡಿ ನಗುವಂತಾಯಿತು' ಎಂದು ಪುಟ್ಟಣ್ಣ ಸಿಟ್ಟಾದ.
ಆ ಸಿಟ್ಟಿನಲ್ಲಿ ಮತ್ತೂ ಗಟ್ಟಿಯಾಗಿ ಬಾಗಿಲು ಬಡೆದ.
ಒಂದು, ಎರಡು, ಮೂರು ಎಂದು ಅದೆಷ್ಟೋ ಸಾರೆ, ಅದೆಷ್ಟೋ ಹೊತ್ತು,
ಸಂಖ್ಯೆ ಎಣಿಸಿ ನಿದ್ದೆ ಹೋಗಿದ್ದ ಸುನಂದಾ ಒಮ್ಮೆಲೆ ಗಡಬಡಿಸಿ ಎದ್ದಳು. ಕರೆದವರು
ಯಾರು? ಪರಿಸ್ಥಿತಿ ಏನು?—ಎಂಬುದನ್ನು ಊಹಿಸಿಕೊಳ್ಳಲು ಆಕೆಗೆ ಒಂದು ಕ್ಷಣ
ಹಿಡಿಯಿತು.
ನಿದ್ದೆಯಿಂದ ಎಚ್ಚತ್ತವಳಿಗೆ ಎಷ್ಟು ಹೊತ್ತಾಯಿತೋ ಗೊತ್ತಾಗಲಿಲ್ಲ. ಆಕೆ
ಕದ ತೆರೆದು ಗಂಡನನ್ನು ಇದಿರ್ಗೊಂಡಳು.

3