ಪುಟ:ಪಾಲಿಗೆ ಬಂದ ಪಂಚಾಮೃತ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

18

ಕನಸು

ಹಿಂದೆಯಾಗಿದ್ದರೆ ಆಕೆ ಗಂಡನನ್ನು ಕೇಳುತ್ತಿದ್ದಳು-ಹೊತ್ತೆಷ್ಟಾಯಿತು?
ಎಂದು. ಈಗ ಅಂತಹ ಅಭ್ಯಾಸವಿರಲಿಲ್ಲ. ಆದರೆ ಬಾಗಿಲು ತೆರೆದಾಗ, ಆ ಬೀದಿ
ಯಲ್ಲಿ ಬರುವ ನಗರದ ಬಸ್ಸೊಂದು ಅತ್ತ ಹೋಯಿತು. 'ಇನ್ನೂ ಬಸ್ಸಿದೆ; ಒಂಭತ್ತೂ
ವರೆ ಆಗಿಲ್ಲ ಹಾಗಾದರೆ'-ಎಂದುಕೊಂಡಳು ಸುನಂದಾ.
'ಯಾಕಿಷ್ಟು ತಡ?' ಎಂದು ಗಂಡನನ್ನು ಕೇಳಬೇಕೆನ್ನಿಸಿತು ಅವಳಿಗೆ. ಆದರೆ
ನಾಲಗೆ ಹೊರಳಲಿಲ್ಲ.
'ಯಾಕೆ ಹೀಗೆ ಗೋಳಾಡಿಸ್ತೀರಾ?' ಎಂದು ಅತ್ತು ಕೂಗಾಡಬೇಕೆನ್ನಿಸಿತು.
ಆದರೆ ಮಾತು ಹೊರಡಲಿಲ್ಲ.
ಪುಟ್ಟಣ್ಣ ಕೊಠಡಿಗೆ ಹೋಗಿ ಕೈಗಡಿಯಾರವನ್ನು ಬಿಚ್ಚಿಟ್ಟ. ಅದನ್ನು ಸಮೀಪಿಸಿ
ಘಂಟೆ ನೋಡಬೇಕೆಂದೇನೂ ಸುನಂದೆಗೆ ತೋಚಲಿಲ್ಲ.
ಆಕೆ ನೇರವಾಗಿ ಅಡುಗೆ ಮನೆಗೆ ಹೋಗಿ ತಟ್ಟೆ ಇಟ್ಟು ಬಡಿಸಲು ಅಣಿಮಾಡಿ
ದಳು. ಪುಟ್ಟಣ್ಣ ಕೈ ಕಾಲು ತೊಳೆದು ಬಂದು ಕುಳಿತ.
ವಿದ್ಯುದ್ದೀಪದ ಬೆಳಕಿನಲ್ಲಿ ಆತನ ಮುಖವನ್ನು ಸುನಂದಾ ನೋಡಿದಳು. ಅದು
ಕಂದಿತ್ತು. ಕಳೆಗುಂದಿ ಕಪ್ಪಿಟ್ಟಿತ್ತು. 'ಯಾಕಿದೀರಾ ಹೀಗೆ?' ಎಂದು ಕೇಳಬೇಕೆಂದು
ಆಕೆಗೆ ತೋರಿತು. ಆದರೆ ಧೈರ್ಯವಾಗಲಿಲ್ಲ.
ಅನ್ನ ವಿಡಲೆಂದು ಕೈಗೆತ್ತಿಕೊಂಡಾಗ ಸುನಂದೆಯ ಮನಸ್ಸು ರೋದಿಸಿತು—
'ಅಯ್ಯೊ! ಎಷ್ಟೊಂದು ತಣ್ಣಗಿದೆ!' ಆ ಮೂಕ ವ್ಯಥೆಯೇ ಬಾಯ್ದೆರದು ಆಡಿತು:
“ಊಟ ಮಾಡ್ಕೊಂಡೇ ಹೋಗೋಕೆ ಆಗ್ತಿರ್ಲಿಲ್ವೆ?”
ಪುಟ್ಟಣ್ಣ ತುತ್ತು ಅನ್ನದೊಡನೆ ಆ ಮಾತನ್ನೂ ನುಂಗಿದ. ಉತ್ತರವಾಗಿ
ಹೇಳಬಯಸಿದ್ದು ಯಾವುದೋ, ಗಂಟಲಲ್ಲೆ ಸಿಲುಕಿಕೊಂಡು ಗರ್ ಎಂದಿತು.
ಗಂಡನಿಗೆ ಹಸಿವೆಯಾಗಿರಬಹುದೆಂದುಕೊಂಡು ಸುನಂದಾ ಮತ್ತೂ ಬಡಿಸ
ಹೋದಳು. ಆತ ಕೈ ಅಡ್ಡ ಹಿಡಿದ:
“ಸಾಕು ನನಗೆ.”
“ಇದೇನು ಇಷ್ಟೊಂದು ಕಡಮೆ ಊಟ ಮಾಡ್ತಿದೀರಲ್ಲಾ?”
“ನನಗೆ ಹಸಿವಿಲ್ಲ.”
“ಯಾಕೆ? ತಿರ್ಗಾ ಹೋಟ್ಲಿಗೆ ಹೋದಿರಾ?”
“ಹಸಿವಿಲ್ಲ ಅಂದೆ!”
“ತಿಳೀತು. ಆದರೆ, ಯಾಕೆ ಹಸಿವಿಲ್ಲಾಂತ ಕೇಳಬಾರ್ದೆ?”
“ಸುನಂದಾ! ನಿಲ್ಸು ಮಾತು!”
ಸುನಂದಾ ಮಾತು ನಿಲ್ಲಿಸಿದಳು. ಆದರೆ, ಸೌಟನ್ನು ಗಟ್ಟಿಯಾಗಿ ತಪ್ಪಲೆಗೆ ಇಳಿ
ಬಿಟ್ಟಳು. ಆಗ ಟೊಂಕ್ ಎಂದು ಸದ್ದಾಯಿತು. ಪುಟ್ಟಣ್ಣ ಎದ್ದು ಬಿಟ್ಟ.
ಆತ ಕೈತೊಳೆದು ಕೊಠಡಿಗೆ ಹೋದೊಡನೆಯೇ ಸುನಂದೆಯ ಕಣ್ಣುಗಳಿಂದ