ಪುಟ:ಪಾಲಿಗೆ ಬಂದ ಪಂಚಾಮೃತ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

19

ಕಂಬನಿ ತಟಕ್ಕನೆ ಚಿಮ್ಮಿತು. ಆದರೆ ತಾನು ದುಃಖಿಸುತ್ತಿದ್ದುದು ಪುಟ್ಟಣ್ಣನಿಗೆ ತಿಳಿಯ
ಬಾರದೆಂದು ಸುನಂದಾ, ಸೆರಗಿನಿಂದ ಕಣ್ಣೊರೆಸಿಕೊಂಡಳು. ರೋದಿಸಲೆಂದು ಅರೆ
ಬಿರಿದಿದ್ದ ತುಟಿಗಳನ್ನು ಬಲವಾಗಿ ಬಿಗಿ ಹಿಡಿದಳು. ಹೃದಯದ ಆ ಸಂಕಟದ ನಡುವೆ
ಏನೂ ಬೇಡವೆಂದಿತು ಹೊಟ್ಟೆ. ತನ್ನ ತಟ್ಟೆಗಿಷ್ಟು ಬಡಿಸಿಕೊಂಡು ಒಂದು ತುತ್ತನ್ನಷ್ಟೆ
ತಿಂದು ಆಕೆಯೂ ಎದ್ದು ಬಿಟ್ಟಳು...
ಸುನಂದಾ ಗರ್ಭಿಣಿ ಎಂದು ಗೊತ್ತಾದುದಕ್ಕೆ ಮುಂಚೆ ಹಲವು ಸಾರೆ ಪುಟ್ಟಣ್ಣ,
ತನ್ನ ಊಟವಾದೊಡನೆಯೇ ಆಕೆಗೆ ಬಡಿಸಲು ಮುಂದಾಗುತ್ತಿದ್ದ. ಅದು ಅತ್ತೆಯ
ಕಾಲದಲ್ಲಿ ಸಾಧ್ಯವಾಗದೇ ಇದ್ದ ಸರಸ. ಹಾಗೆ ಊಟವಾದ ಮೇಲೆ ದಂಪತಿ ಪರಸ್ಪರ
ರಿಗೆ ಸುವಾಸನೆಯ ಅಡಿಕೆಪುಡಿ ಕೊಡುತ್ತಿದ್ದರು. ಬೇರೆಯೂ ಇನ್ನೇನೋ....ಈಗ
ಅಂತಹದೊಂದೂ ಇರಲಿಲ್ಲ. ಬಹಳ ದಿನ ಗಂಡನ ಊಟವಾದ ಮೇಲೆ ಆತನಿಗೆ
ಅಡಿಕೆಪುಡಿ ಸಲ್ಲಿಸಲು ಸುನಂದಾ ಯತ್ನಿಸಿದಳು. ಆದರೆ ಪುಟ್ಟಣ್ಣ ಅದಕ್ಕೆಲ್ಲ ತಡೆ
ಹಾಕಿದ್ದ. “ಹೋಗು, ಊಟಮಾಡು. ಅಡಿಕೆ ಬೇಕಾದರೆ ನಾನೇ ತಗೋತೀನಿ,”
ಎಂದಿದ್ದ. ಸುನಂದಾ ಸುಮ್ಮನಾಗಿದ್ದಳು. ಮತ್ತೆ ಕೆಲವು ದಿನಗಳ ಮೇಲೆ ಅಡಿಕೆ
ಕೊಡಲು ಯತ್ನಿಸಿದಾಗ ಆತ ಗದರಿಸಿದ್ದ: “ಒಮ್ಮೆ ಹೇಳ್ಲಿಲ್ವೆ ನಿನಗೆ? ಇನ್ನೊಮ್ಮೆ
ವೈಯಾರ ಮಾಡ್ತಾ ಬಂದರೆ, ಹುಷಾರ್!”
ಅಬ್ಬ! ಎಂತಹ ಮಾತು! ಗಂಡನ ಮುಂದೆ ಹೆಂಡತಿಯ ವೈಯಾರ...
ಸುನಂದಾ ರೇಗಿ ಅಂದಿದ್ದಳು:
“ಯಾಕೆ ಹೀಗೆಲ್ಲಾ ಆಡ್ತೀರಾ? ನಿಮಗೆ ತಲೆ ಕೆಟ್ಟಿದೆಯೇನು?”
ಅವನು ಕಿವಿಯೊಡೆಯುವ ಹಾಗೆ ಕೂಗಾಡಿದ್ದ :
“ಹೌದು, ತಲೆ ಕೆಟ್ಟಿದೆ ನನಗೆ!”
...ತಲೆ ಕೆಟ್ಟಿರಲಿಲ್ಲ, ಆದರೂ ಅದೇನೋ ಆಗಿತ್ತು. ಮಗು ಬಸಿರಿನಲ್ಲಿದ್ದಾ
ಗಲೇ ಆತನಿಗೇನೋ ಆಗಿತ್ತು. ತಾನು ತವರುಮನೆಯಲ್ಲಿದ್ದಾಗ ತನ್ನ ಗಂಡನ ಆ
'ಕಾಹಿಲೆ' ಬಲವಾಯಿತು. ತಾಯಿಯಾಗಿ ತಾನು ಮರಳಿದ್ದಳು. ಆದರೆ ಆತ
ಹಿಂದಿನ ಗಂಡನಾಗಿಯೇ ತನಗೆ ದೊರೆಯಲಿಲ್ಲ...
... ಅಡುಗೆಮನೆಯ ಬಾಗಿಲೆಳೆದುಕೊಂಡು ಸುನಂದಾ ತೊಟ್ಟಿಲ ಬಳಿ ಬಂದು
ನಿಂತಳು. ಏನನ್ನೋ ಮರೆತಹಾಗೆ ತೋರಿತು. ಗಂಡನಿಗೆ ಕುಡಿಯಲೆಂದು ಒಂದು
ಲೋಟ ನೀರು ಒಯ್ದು ಕೊಟ್ಟಿರಲಿಲ್ಲ. ಮತ್ತೆ ಅಡುಗೆ ಮನೆಗೆ ಹೋಗಿ ಆಕೆ ನೀರು
ತಂದಳು...ಹಿಂದೆ ಆ ರೀತಿ ಒಂದು ಲೋಟ ಹಾಲನ್ನು ಒಯ್ದು ಕೊಡುವುದು ಪದ್ಧತಿ
ಯಾಗಿತ್ತು. ಈಗ ಹಾಲಿನ ಬದಲು ನೀರು ತುಂಬಿದ ಲೋಟ...
ಪುಟ್ಟಣ್ಣ ದೀಪ ಆರಿಸಿ ಕತ್ತಲೆಯಲ್ಲೇ ಹಾಸಿಗೆಯ ಮೇಲೆ ಉರುಳಿಕೊಂಡಿದ್ದ.
ಆತ ನಿದ್ದೆ ಹೋಗಿರಲಿಲ್ಲವೆಂಬುದನ್ನು ಆ ದೇಹದ ನಿಶ್ಚಲತೆಯೇ ಸಾರುತಿತ್ತು.
ಸುನಂದಾ ಮೆಲ್ಲನೆ ನಡೆದುಬಂದು ತಲೆಯ ಮೇಲುಭಾಗದಲ್ಲಿ ಗೋಡೆಯ ಬಳಿ ಲೋಟ