ಪುಟ:ಪಾಲಿಗೆ ಬಂದ ಪಂಚಾಮೃತ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

21

ಯೋಚಿಸಿದಳು....
ಸೀಮೆ ಎಣ್ಣೆಯ ಮಿಣುಕು ದೀಪದ ಮಂದಪ್ರಕಾಶ, ಒಂದು ಮೂಲೆಯಿಂದ
ತೂರಿ ಬರುತ್ತಿತ್ತು.... ವಿದ್ಯುದ್ದೀಪ ಪ್ರಕಾಶಮಾನವಾದದ್ದು ; ಇದು ಮಂದ. ಆದರೆ
ಎರಡರಿಂದಲೂ ಬೆಳಕು ದೊರೆಯುತ್ತಿತ್ತು. ಮದುವೆಗೆ ಮುಂಚೆ ಎಷ್ಟೋ ಸಾರೆ
ಸುನಂದಾ ತನ್ನಷ್ಟಕ್ಕೇ ಆಡಿಕೊಂಡಿದ್ದಳು: 'ಬಡವನಾದರೂ ಸರಿಯೆ. ನನ್ನ ಗಂಡ
ಸದ್ಗುಣಿಯಾಗಿರಲಿ ದೇವರೆ. ನನ್ನ ದಾಂಪತ್ಯ ಜೀವನ ಮಂಗಲಕರವಾಗಲಿ. ಸಿರಿವಂತಿಕೆ
ಇಲ್ಲದಿದ್ದರೆ ನನಗೆ ಬೇಸರವಿಲ್ಲ. ಆದರೆ ಒಳ್ಳೆಯತನದ ಕೊರತೆ ಮಾತ್ರ ನಮ್ಮನ್ನು
ಕಾಡದಿರಲಿ. ಬಡವನ ಗುಡಿಸಲಾದರೂ ಸರಿಯೇ, ನಾವು ಆದರ್ಶವಾಗಿ ಬದುಕುವಂತೆ
ಮಾಡು.'
ಮುಂದೆ ಮದುವೆಯಾದಾಗ, ಹಿಂದಿನ ಪ್ರಾರ್ಥನೆಯನ್ನೆಲ್ಲ ಸುನಂದಾ ಮರೆತಳು.
ದಾಂಪತ್ಯ - ಜೀವನದ ಮಹಾ ಪ್ರಯೋಗವನ್ನು ಯಶಸ್ವಿಗೊಳಿಸಲೆಂದು ಹಾತೊರೆದ
ಆಕೆಗೆ, ಹಿಂದಿನದನ್ನು ಸ್ಮರಿಸಿಕೊಳ್ಳಲು ಪುರಸೊತ್ತಿರಲಿಲ್ಲ.
ಆದರೆ ಈಗ, ಬದುಕು ಒಂದು ಘಟ್ಟಕ್ಕೆ ಬಂದು ನಿಂತಿತ್ತು. ಸಂಸಾರ ರಥದ
ಗಾಲಿಗಳು ತೇವ ಮಣ್ಣಿನಲ್ಲಿ ಆಳಕ್ಕೆ ಹೂತುಹೋಗಿದ್ದುವು....
ಹುಡುಗಿಯಾಗಿದ್ದಾಗ ನಾಳೆಯ ಬಗೆಗೆ ಮಧುರತರ ಕಲ್ಪನೆಗಳ ನಕ್ಷತ್ರಮಾಲೆ
ರಚಿಸುವುದು ಸಾಮಾನ್ಯ ವಿಷಯ. ಸುನಂದಾ ಅದಕ್ಕೆ ಹೊರತಾಗಿರಲಿಲ್ಲ. ಆಕೆ ಓರ
ಗೆಯ ಹುಡುಗರೊಡನೆ ಓಡಿಯಾಡಿದವಳಲ್ಲ. ಅವರ ಕುಟುಂಬದಲ್ಲಿ ಸಮೀಪದವ
ರೆನ್ನುವ ಸಂಬಂಧಿಕ ಎಳೆಯ ಯುವಕರು ಯಾರೂ ಇರಲಿಲ್ಲ. ಹೀಗಾಗಿ ಕೌಮಾರ್ಯ
ದಲ್ಲಿ ಹೃದಯದೊಳಗೆ ಮೂಡಿಬಂದ ಒಲವಿಗೆ ಪ್ರತಿಯಾದ ಒಲವು ಆಕೆಗೆ ದೊರಕಿರ
ಲಿಲ್ಲ. ಆಕೆಯ ಪ್ರಪಂಚ ಚಿಕ್ಕದಾಗಿತ್ತು. ಆ ಸಂಸಾರಕ್ಕೆ ಸಂಬಂಧಿಸಿದಷ್ಟು. ಅದರ
ಹೊರತಾಗಿ ತಿಳಿದಿದ್ದುದೆಲ್ಲ, ಕಥೆ ಕಾದಂಬರಿಗಳ ಮೂಲಕ ಆಕೆ ಕಂಡುಕೊಂಡ ಲೋಕ.
ಸುನಂದೆಗೆ ಆದರ್ಶದ ಹುಚ್ಚು ಬಲವಾಗಿ ಅಂಟಿಕೊಂಡಿತ್ತು. ತನ್ನದು ಆದರ್ಶ ಸಂಸಾರ
ವಾಗಬೇಕು. ತಾನು ಆದರ್ಶ ಗೃಹಿಣಿಯಾಗಬೇಕು. ತನ್ನ ಕೈ ಹಿಡಿದವನು ಆದರ್ಶ
ಪುರುಷನಾಗಬೇಕು...
ಈಗ ಏನಾಗಿತ್ತು? ವಸ್ತುಸ್ಥಿತಿಯೊಡನೆ ಘರ್ಷಣೆಯಾಗಿ ವಿರೂಪ ತಳೆದಿತ್ತು ಆ
ಆದರ್ಶ....
....ನೀಳವಾಗಿ ಉಸಿರು ಬಿಟ್ಟು ಸುನಂದಾ ಗೋಡೆಗೊರಗಿಯೆ ಕುಳಿತಳು.
ಹಿಂದೆಯೂ ಹಾಗೆ ಎಷ್ಟು ಸಾರೆ ಕುಳಿತಿರಲಿಲ್ಲ ಆಕೆ! ಆಗ ಹೃದಯದಲ್ಲಿ ಮಿಡಿ
ಯುತ್ತಿದ್ದುದು ಮಧುರ ಭಾವನೆ ಮಾತ್ರ. ದೀಪವಾರಿಸುವುದನ್ನೇ ಕಾದಿರುತ್ತಿದ್ದ ಆ
ದಿನಗಳು... ಆಗ ಗಂಡ ತನ್ನೆಡೆಗೆ ಧಾವಿಸಿ ಬರುತ್ತಿದ್ದ. ಆತನ ತೋಳುಗಳು ಆಕೆ
ಯನ್ನು ಸುತ್ತುವರಿಯುತ್ತಿದ್ದುವು. ಆ ವಕ್ಷಸ್ಥಳದ ಆಸರೆಯಲ್ಲಿ ಆಕೆ ಮೈ ಮರೆಯು
ತ್ತಿದ್ದಳು. ಆತನೂ ಅಷ್ಟೆ. ತಾನು ಪಡೆದ ಸುಖವನ್ನೇ ಆತನೂ ಪಡೆಯುತ್ತಿದ್ದ