ಪುಟ:ಪಾಲಿಗೆ ಬಂದ ಪಂಚಾಮೃತ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

23

ಮನಸಿಗೆ ನೆಮ್ಮದಿ ಇಲ್ಲದೆಯೇ ಆತ ಎದ್ದಿದ್ದ. ನೂರೊಂದು ಯೋಚನೆಗಳು ಆತನನ್ನು
ಕಾಡುತ್ತಿದ್ದುವು. ಯಾಕೆ ಹೀಗಾಯಿತೊ ಬದುಕು?__ಎಂದು ಅವನ ಹೃದಯ
ಹೊಯ್ದಾಡುತ್ತಿತ್ತು.
ಒಳಗಿನ ತುಮುಲ ಹೊರಗೆ ಕಾಣಿಸುವುದೇನೋ ಎಂದು ಕನ್ನಡಿಯನ್ನು ಆತ
ನೆಟ್ಟ ದೃಷ್ಟಿಯಿಂದ ನೋಡಿದ. ಅದೇ ದುಂಡಗಿನ ಮುಖ, ದೃಢ ನಿರ್ಧಾರವನ್ನು
ತೋರುವ ಗಲ್ಲ, ಬಲಿತ ದೃಷ್ಟಿಯ ಕಣ್ಣುಗಳು;... ಒಂದೂ ಬದಲಾಗಿರಲಿಲ್ಲ.
ದುಂಡಗೆ ಗುಂಡಗೆ ಬಲಶಾಲಿಯಾಗಿದ್ದನೆಂದು ಹಳೆಯ ಗೆಳೆಯರೂ ಹಿಂದೆ ಆತನಿಗೆ
'ಗುಂಡ' ಎಂದು ಅಡ್ಡಹೆಸರಿಟ್ಟಿದ್ದರು. ಈಗಲೂ ಅವರು ಆಗೊಮ್ಮೆ ಈಗೊಮ್ಮೆ
ದೃಷ್ಟಿಗೆ ಬಿದ್ದು ಕಾಫಿ ತಿಂಡಿಗಳು ನಡೆದಾಗ, “ಚಿರಯೌವನ ಕಣೋ ನಿನ್ನದು.
ಅದೇನು ಅಮೃತ ಗುಳಿಗೆ ತಿಂದಿದಿಯೋ ಗುಂಡ!” ಎಂದು ಮಾತು ಬರುತ್ತಿತ್ತು.
ಈ ಬೆಳಗ್ಗೆ ತನ್ನ ಮುಖದ ಪ್ರತಿಬಿಂಬವನ್ನು ನೋಡುತ್ತ ತುಟಿತೆರೆಯದೆಯೇ
ವಕ್ರವಾಗಿ ನಕ್ಕು ಪುಟ್ಟಣ್ಣ ಅಂದುಕೊಂಡ:
'ಅಮೃತ ಗುಳಿಗೆಯಲ್ಲ. ನನ್ನ ಗಂಟಲಲ್ಲಿ ಸಿಲುಕಿ ಕೊಂಡಿರುವುದೀಗ ವಿಷದ
ಗುಳಿಗೆ!'
...ಸುನಂದಾ ಕೊಠಡಿಯೊಳಕ್ಕೆ ಬಂದಳು. ಕಾಫಿಯ ಲೋಟವನ್ನು ಮೇಜಿನ
ಮೇಲಿಟ್ಟು, “ಕಾಫಿ ಇಟ್ಟಿದೀನಿ” ಅಂದಳು. ಪುಟ್ಟಣ್ಣ ಮಾತನಾಡಲಿಲ್ಲ; ಅತ್ತ ತಿರು
ಗಿಯೂ ನೋಡಲಿಲ್ಲ. ಹೊರಡುತ್ತ ಆಕೆ ಬಾಗಿಲ ಬಳಿ ತಡೆದು ನಿಂತು, “ಸ್ನಾನಕ್ಕೆ
ನೀರು ಕಾದಿದೆ” ಎಂದಳು. ಆಗಲೂ ಪುಟ್ಟಣ್ಣ ಉತ್ತರಿಸಲಿಲ್ಲ. ಕ್ಷೌರ ಸರಿಯಾಗಿ
ಆಯಿತೇ ಎಂದು ಕತ್ತು ಗಲ್ಲಗಳನ್ನು ಮುಟ್ಟಿ ನೋಡಿಕೊಂಡ. ಸುನಂದಾ ಹೊರಟು
ಹೋದುದರ ಕಾಲ ಸಪ್ಪಳ ಕೇಳಿಸಿದ ಮೇಲೆ ಮಾತ್ರ ಬಾಗಿಲಿನತ್ತ ತಿರುಗಿ ನೋಡಿದ.
ಮನಸ್ಸು ವಕ್ರ ವಕ್ರವಾಗಿ ಅಂದಿತು:
'ಇವಳೀಗ ನನ್ನ ಹೆಂಡತಿ!'
ಮದುವೆ ನಿಷ್ಕರ್ಷೆಯಾದಾಗಲೇ ಆತನಿಗೆ ಅನಿಸಿತ್ತು: ಈಕೆ ತನಗೆ ಸರಿಯಾದ
ಜೋಡಿ ಅಲ್ಲವೆಂದು. ಆಗಲೆ ಎರಡು ಮೂರು ಹೆಣ್ಣುಗಳನ್ನು ನೋಡಿ ನಿರಾಕರಿ
ಸಿದ್ದವನು ಈಕೆಯೂ 'ಬೇಡ' ಎನ್ನಬಹುದಿತ್ತು. ಆದರೆ ತಾಯಿ ಗೋಳು ಹೊಯ್ದು
ಕೊಂಡಿದ್ದಳು: “ಈಕೇನೂ ಒಪ್ಪಿಗೆಯಾಗದೇ ಹೋದರೆ ನಿನಗೆ ಬೇಕಾದ ಹೆಣ್ಣನ್ನ
ಬ್ರಹ್ಮ ಹುಟ್ಟಿಸಿಯೇ ಇಲ್ಲಾಂತ ತಿಳ್ಕೋತೀನಿ. ಏನಾಗಿದೆ ಇವಳಿಗೆ? ಯಾವ
ಕೊರತೆ?”
ಹೃದಯ ದುರ್ಬಲವಾಗಿದ್ದ ಒಂದು ಕ್ಷಣಕಾಲದಲ್ಲಿ ಅಚಾತುರ್ಯವಾಗಿ
ಹೋಗಿತ್ತು. ಪುಟ್ಟಣ್ಣನೆಂದಿದ್ದ:
“ಆಗಲಮ್ಮ. ಹುಡುಗಿ ನಿನಗೆ ಒಪ್ಪಿಗೆಯಾದರೆ ನನಗೂ ಒಪ್ಪಿಗೇನೆ.”
ಅಷ್ಟರಿಂದಲೆ ಸಂತುಷ್ಟರಾದ ತಾಯಿ ವಾಡಿಕೆಯಾಗಿ ಹೇಳಿದ್ದರು: