ಪುಟ:ಪಾಲಿಗೆ ಬಂದ ಪಂಚಾಮೃತ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

26

ಕನಸು

ಈಗ ಬೆಳಗಾಗಿದೆ. ಇನ್ನು ಸ್ವಲ್ಪ ಹೊತ್ತಿನಲ್ಲೆ ಒಬ್ಬೊಬ್ಬರಾಗಿ ವಸೂಲಿಗೆ
ಬರುವರು...
ಈ ದಿನ ಗಂಡನೊಡನೆ ಖಡಾಖಂಡಿತವಾಗಿ ಮಾತನಾಡಲೇಬೇಕೆಂದು, ರಾತ್ರೆ
ಸುನಂದಾ ನಿರ್ಧರಿಸಿದ್ದಳು. ಆ ನಿರ್ಧಾರವನ್ನೀಗ ಕೃತಿಗಿಳಿಸಬೇಕು.
ನಿರ್ಧರಿಸುವುದು ಅಷ್ಟು ಕಷ್ಟವಾಗಿರಲಿಲ್ಲ. ಆದರೆ ಕೃತಿಗಿಳಿಸುವುದು?
ಕೆಲಸ ಕಷ್ಟದ್ದೆಂದು ಸುಮ್ಮನಿರುವುದಾದರೂ ಸಾಧ್ಯವಿತ್ತೆ? ಮನೆ ಉರಿಯುತ್ತ
ಲಿದ್ದಾಗ, ನಿದ್ರಾ ಭಂಗವಾಗುವುದೆಂದು ಕೂಗಿ ಕರೆಯದೆ ಇರುತ್ತಾರಾ?
ಸುನಂದಾ ಅಳುತ್ತಲಿದ್ದ ಮಗುವನ್ನೆತ್ತಿಕೊಂಡಳು. ತೊಟ್ಟಿಲು ಗಲೀಜಾಗಿತ್ತು.
ಅದನ್ನು ಶುಚಿಗೊಳಿಸಲು ಆಕೆ ಮುಂದಾದಳು.
ಆ ಬಳಿಕ ಮಗುವನ್ನೆತ್ತಿಕೊಂಡೇ ಸುನಂದಾ ಗಂಡನ ಕೊಠಡಿಯ ಬಾಗಿಲಿಗೆ
ಬಂದಳು. ತಾಯಿ ಯೋಚಿಸಿ ಸಿದ್ಧಳಾಗುತಿದ್ದ ಮಾತುಕತೆಯಲ್ಲಿ ಯಾವ ಆಸಕ್ತಿಯೂ
ಇಲ್ಲವೆಂಬಂತೆ ಮಗು, ತನಗೆ ಬೇಕಾದುದನ್ನು ಕೇಳಿತು. ಸುನಂದಾ ಅಲ್ಲಿಯೇ
ಗೋಡೆಯ ಬಳಿ ಕುಳಿತು ಮಗುವಿಗೆ ಮೊಲೆಯೂಡಿದಳು.
ಪುಟ್ಟಣ್ಣ ಪೋಷಾಕು ಧರಿಸಿಕೊಳ್ಳುತ್ತಿದ್ದ. ಇನ್ನು ಸ್ವಲ್ಪ ಹೊತ್ತಿನಲ್ಲೇ ಆತ
ಹೊರಟು ಹೋಗುವ. ಮಾತುಕತೆಯನ್ನು ಮತ್ತಷ್ಟು ತಡೆಯುವುದರಲ್ಲಿ ಅರ್ಥವೇ
ಇರಲಿಲ್ಲ.
ಒಮ್ಮೆಲೆ ಸುನಂದೆಗೆ ತೋರಿತು:
'ಹಾಳಾಗಿ ಹೋಗಲಿ. ರಾತ್ರೆ ಕೇಳೋಣ.'
ಆದರೆ ಮನಸ್ಸಿನ ಹೇಡಿತನವನ್ನು ಸಾತ್ವಿಕ ಗುಣವೆಂದು ಒಪ್ಪಿಕೊಂಡು ಸುಮ್ಮ
ನಾಗಲು ವಿವೇಕ ಸಿದ್ಧವಿರಲಿಲ್ಲ. ಅದು ಕೇಳಿತು:
'ಈ ಸಂಜೆಯೂ ಮನೆಗೆ ಬಂದೊಡನೆ ಆತ ಹೊರಬಿದ್ದರೆ?'
'ಮನೆಗೆ-ಸಂಸಾರಕ್ಕೆ-ಸಂಬಂಧಿಸಿದ ಈ ವಿಷಯ ಮಾತನಾಡುವ ಅಧಿಕಾರವೂ
ನನಗಿಲ್ಲವೆಂದಾಯಿತೆ ಹಾಗಾದರೆ?'
ಮಾತನಾಡುವುದೇನೋ ನಿಜವೆ. ಹೇಗೆ ಆರಂಭಿಸಬೇಕು? ಎನ್ನುವ ಮುಖ್ಯ
ಪ್ರಶ್ನೆ ಯಿತ್ತು. ಅದನ್ನು ಕುರಿತು ಸುನಂದಾ ವಿವರವಾಗಿ ಯೋಚಿಸಿದಳು. ಆದರೆ
ಯೋಚನೆ ನಿರ್ದಿಷ್ಟ ರೂಪ ತಳೆಯಲೇ ಇಲ್ಲ.
ಅಷ್ಟರಲ್ಲಿ ನಿರೀಕ್ಷಿಸುವುದಕ್ಕೆ ಮುಂಚಿತವಾಗಿಯೇ, ಗಂಡ ಬೂಟು ಹಾಕಿಕೊಳ್ಳು
ತ್ತಿದ್ದಂತೆಯೇ, ಆಕೆಯ ಸ್ವರ ಹೊರಬಿತ್ತು:
“ಆಫೀಸಿಗೆ ಹೊರಟಿರೇನು?”
ಹಿಂದೆ ಆಕೆಯೇ ಬೂಟಿನ ಧೂಳನ್ನೊರೆಸಿ ಸಿದ್ಧಪಡಿಸುತ್ತಿದ್ದಳು. 'ಇದು ಹೆಣ್ಣು
ಪರಾಧೀನಳೆಂದು ತೋರಿಸುವ ಗುಲಾಮ ಚಾಕರಿಯಲ್ಲ. ಪ್ರೀತಿಯ ಒಂದು ರೀತಿ'
ಎಂದು ತನ್ನಷ್ಟಕ್ಕೆ ಸಿದ್ಧಾಂತ ರೂಪಿಸಿ ಕೊಂಡಿದ್ದಳು. ಈಗ ಅಂತಹ ಕೆಲಸವಿರಲಿಲ್ಲ.