ಪುಟ:ಪಾಲಿಗೆ ಬಂದ ಪಂಚಾಮೃತ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾ ಮೃತ

27

'ನೀನಿನ್ನು ಬೂಟ್ಸು ಮುಟ್ಟಬಾರದು' ಎಂದು ಗಟ್ಟಿಯಾದ ಸ್ವರದಲ್ಲಿ ಗದರಿ ಹೇಳಿದ್ದ
ಗಂಡ.
ಹೆಂಡತಿ ಮಾತನಾಡಬಹುದೆಂದು ನಿರೀಕ್ಷಿಸಿಯೇ ಇದ್ದ ಪುಟ್ಟಣ್ಣನಿಗೆ ಆ
ಪ್ರಶ್ನೆ ಅನಿರೀಕ್ಷಿತವಾಗಿರಲಿಲ್ಲ. ಉತ್ತರವೆಂದು ಪುಟ್ಟಣ್ಣ ಗಂಟಲು ಸರಿಪಡಿಸಿದ.
"ಹೂಂ."
ಯಾಕೆ ಕೇಳಿದೆ? ಎಂಬ ಅವ್ಯಕ್ತ ಪ್ರಶ್ನೆಯೂ ಅಡಕವಾಗಿತ್ತು ಆ ಹೂಂ
ಕಾರದಲ್ಲಿ.
"ನಿನ್ನೆ ಹೇಳಿದ್ದು ನೆನಪಿದೆಯೇನು?"
ನೆನಪಿತ್ತು. ಆದರೂ ಒಂದೂ ತಿಳಿಯದವನಂತೆ ಪುಟ್ಟಣ್ಣ ಕೇಳಿದ:
"ಇಲ್ವಲ್ಲ. ಏನು?"
ಗಂಡ ಸುಳ್ಳಾಡುತ್ತಿರುವನೆಂಬುದು ಗೊತ್ತಿದ್ದೇ ಸುನಂದಾ ಹೇಳಿದಳು:
"ಈ ದಿನ ಬಾಡಿಗೆ ವಸೂಲಿಗೆ ಮನೆ ಮಾಲಿಕರು ಬರಬಹುದು_"
ಒಮ್ಮೆಲೆ ರೋಷದಿಂದ ಮುಖ ಕೆಂಪಡರಿ ಪುಟ್ಟಣ್ಣ ಕೂಗಾಡಿದ:
"ಅಷ್ಟೇನಾ? ಎಲ್ಲಾ ಒಂದೇ ಸಲ ಹೇಳಿ ಮುಗಿಸು!"
ಸುನಂದೆಯ ಮುಖಕ್ಕೇ ಬಡೆದಂತಾಯಿತು ಆ ಮಾತು. ಶಾಂತವಾಗಿ ಬಿಡಿ
ಬಿಡಿಯಾಗಿ ಒಂದೊಂದೇ ವಿಷಯವನ್ನು ಪ್ರಸ್ತಾಪಿಸಿ, ಅಗತ್ಯ ಬಿದ್ದರೆ ಮೃದುವಾಗಿ
ವಾದಿಸಿ, ಕಣ್ಣೀರನ್ನು ಸುರಿಸಿ, ತಾನು ಗೆಲ್ಲಬೇಕೆಂದು ಸುನಂದಾ ಯೋಚಿಸಿದ್ದಳು.
ಆದರೆ ಗಂಡನ ಆರ್ಭಟದೆದುರು ಆ ಯೋಚನೆಯಲ್ಲಿ ತಲೆಕೆಳಗಾಯಿತು. ಒಂದು
ನಿಮಿಷ ನಾಲಗೆಯೇ ಉಡುಗಿ ಹೋದವರಂತೆ ಆಕೆ ಕುಳಿತಳು. ಆದರೆ ಗಂಡ ಕೋಟು
ತೊಟ್ಟುಕೊಳ್ಳುತ್ತಿದ್ದಂತೆಯೇ ಚೇತರಿಸಿಕೊಂಡಳು:
"ಧಾರಾಳವಾಗಿ ಹೇಳ್ತೀನಿ. ಅಗಸರವನೂ ಬರ್ತಾನೆ. ನಾಳೆ ಅಕ್ಕಿ ತೀರುತ್ತೆ.
ಜಿನಸಿನ ಅಂಗಡಿಯವನಿಗೆ ಮುಖ ತೋರಿಸೋ ಹಾಗಿಲ್ಲ. ನಾಡಿದ್ದು ಕೆಲಸದವಳು
ಬಂದೇ ಬರ್ತಾಳೆ. ಹಾಲ್ನೋನು ನಿಲ್ಲಿಸ್ಬಿಡ್ತೀನಿ ಅಂದಿದಾನೆ. ಲೈಟ್ ಬಿಲ್ಲು ಕಟ್ಟೋ
ಸಮಯವೂ ಆಗ್ತಾ ಬಂತು... ಡಾಕ್ಟರಿಗೂ ಕೊಟ್ಟಿಲ್ಲ."
ಗಟ್ಟಿಯಾಗಿ ಹಾಗೆ ಹೇಳುತ್ತಿದ್ದ ತನ್ನ ಸ್ವರವನ್ನು ತಾನೆ ಕೇಳುತ್ತ ಸುನಂದಾ
ಧೈರ್ಯಗೊಂಡಳು.
ಆದರೆ ಆತ ಅಷ್ಟಕ್ಕೆಲ್ಲ ಅಧೀರನಾಗುವಂತಿರಲಿಲ್ಲ.
“ಮುಗೀತೇನು?"
"ಮುಗೀತು_ಸದ್ಯಕ್ಕೆ. ಏನು ಯೋಚ್ನೆ ಮಾಡಿದೀರ ಹೇಳಿ?"
"ಯೋಚ್ನೆ ಮಾಡೋದೂಂದ್ರೆ?"
"ಯಾಕೆ? ಯೋಚ್ನೆ ಮಾಡೋದೂಂತ ಇಲ್ವೇನು?"
"ಸಾಕು! ಇನ್ನೂ ಉದ್ದಕ್ಕೆ ಎಳೀಬೇಡ!”