ಪುಟ:ಪಾಲಿಗೆ ಬಂದ ಪಂಚಾಮೃತ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

31

ಗದರಿಸಬೇಕಾದ ಕಡೆ ನಗೆಮಾತು.
“ಹಾಗಲ್ಲ ಸಾರ್...”
“ಪರವಾಗಿಲ್ಲ ಮಿ. ಪುಟ್ಟಣ್ಣ, ಹೋಗಿ ಸುಮ್ಮನೆ ತಮಾಷೆಗೆ ಅಂದೆ. ಮದುವೆ
ಆಗಿ ಒಂದು ವರ್ಷವಾದ್ಮೇಲೆ ಹನಿಮೂನ್ ಶುರು ಮಾಡಿದೀರಲ್ಲ ಅದಕ್ಕೆ ಅಂದೆ.”
ನಾಚಿಕೆಯಿಂದ ಮುಖಕೆಂಪೇರಿದ ಪುಟ್ಟಣ್ಣ ದಡದಡನೆ ಮೆಟ್ಟಲಿಳಿದು ಬೀದಿ
ಸೇರಿದ.
....ಎಲ್ಲಾ ಎಷ್ಟೊಂದು ವಿಚಿತ್ರ! ಪುಟ್ಟಣ್ಣನಿಗನಿಸುತಿತ್ತು: ಎಲ್ಲ ಗಂಡಸರೂ
ಹೀಗೆಯೇ ಇರಬೇಕು. ಮದುವೆಯಾಗಿ ಹೆಣ್ಣಿನ ಸಹವಾಸ ದೊರೆತ ಮೊದಲಲ್ಲಿ
ಮೈಮರೆತು ಬಿಡುವುದು. ಆ ಮೇಲೂ ಎಚ್ಚರಗೊಳ್ಳುವವರ ಸಂಖ್ಯೆ ಕಡಮೆ.
ಹೆಂಡಂದಿರಿಗೆ ದಾಸರಾಗುವವರೇ ಹೆಚ್ಚು; ಸಂಸಾರದ ಸುಳಿಯಲ್ಲಿ ಸಿಲುಕಿ ಆಳ ಆಳಕ್ಕೆ
ಇಳಿಯುವವರೇ ಅಧಿಕ.
ತಾನು ಹಾಗಲ್ಲ, ತಾನು ಹಾಗಾಗಬಾರದು. ತನ್ನ ಬದುಕಿಗೊಂದು ಗುರಿಯಿದೆ.
ಅದನ್ನು ತಾನು ಸೇರಬೇಕು. ಅಡೆತಡೆಗಳು ಏನು ಒದಗಿದರೂ ಒದ್ದು ಝಾಡಿಸಿ
ವಂದೆ ಸಾಗಬೇಕು...
...ಹೋಟೆಲಿನ ಮಾಣಿ ಹತ್ತಿರ ಬಂದಾಗ ಪುಟ್ಟಣ್ಣ ಹೇಳಿದ:
“ಕಾಫಿ.”
“ಸ್ಪೆಷಲ್ಲೆ ಸಾರ್?”
“ಹೂಂ.”
...ಮನೆಯಿಂದ ಸುನಂದಾ ಕಳುಹಿದ್ದ ಊಟ ಆಗಲೆ ಬಂದಿತ್ತು. ಏನು ಅಡುಗೆ
ಇವತ್ತು? ಹಿಂದೆಯಾದರೆ ಅದೇನೆಂದು ತಿಳಿದುಕೊಂಡು ಅದರ ರುಚಿಯ ನಿರೀಕ್ಷಣೆ
ಯಲ್ಲಿ ಆತನಿರುತ್ತಿದ್ದ. ಈಗ ಆಸಕ್ತಿಯಿಲ್ಲ.... 'ಬೇಳೆ ಸಾರುಮಾಡು'-ತಾನೆ ಅಂದಿದ್ದ
ನಲ್ಲವೆ ಆ ಮಾತನ್ನು ? ಹುಂ! ಎಷ್ಟು ತಮಾಷೆ! ಹಿಂದೆ ತನ್ನ ಕೊರಳನ್ನು ಕೈಗಳಿಂದ
ಸುತ್ತುವರಿದು, ಅದು ಬೇಕು_ಇದು ಬೇಕು ಎಂದು ಆಕೆ ಕೇಳುತ್ತಿದ್ದಳು. ತಾನು ಒಪ್ಪಿ
ಕೊಂಡು ಬಿಡುತ್ತಿದ್ದ. ಹಾಗೆ ನಿಧಾನವಾಗಿ ತನ್ನ ಮೇಲೆ ಪ್ರಭುತ್ವ ನಡೆಸಲು ಆಕೆ
ಯತ್ನಿಸುತ್ತಿದ್ದಳು. ಆದರೆ ಆ ತಂತ್ರ ಯಶಸ್ವಿಯಾಗುವುದಕ್ಕೆ ಮುಂಚೆಯೇ ತಾನು
ಕೈ ಕೊಸರಿಕೊಂಡಿದ್ದ.
ಆತ್ಮಾಭಿಮಾನದಿಂದ ಪುಟ್ಟಣ್ಣನೆಂದುಕೊಂಡ:
“ನಾನು ಗಂಡಸು, ಆಕೆ ಎಷ್ಟೆಂದರೂ ಹೆಣ್ಣು ಹೆಂಗಸು.”
ಕಾಫಿ ಬಂತು, ಬಿಲ್ ಬಂತು.
ಮನೆಯ ಊಟವನ್ನು ಜವಾನನಿಗೆ ಬಿಟ್ಟು ಈ ಉಪಾಹಾರಕ್ಕೋಸ್ಕರ ದುಡ್ಡು
ತೆರುವುದು ತಪ್ಪಲ್ಲವೇನೊ-ಎಂದು ಕೆಣಕಿತು ಮನಸ್ಸು. ಮೌನದ ಭಾಷೆಯಲ್ಲಿ
ಪುಟ್ಟಣ್ಣ ಮನಸ್ಸಿಗೆ ಉತ್ತರವಿತ್ತ: 'ತಪ್ಪಲ್ಲ: ಹೆಂಡತಿಯ ಮೇಲೆ, ಆ ಅಡುಗೆಯ