ಪುಟ:ಪಾಲಿಗೆ ಬಂದ ಪಂಚಾಮೃತ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

36

ಕನಸು

ಮಾತನ್ನು ಆಗಲೆ ಯೋಚಿಸಿದ್ದ ಪುಟ್ಟಣ್ಣ ಕೂಗಿ ಹೇಳಿದ:
“ಎಲ್ಲಿ ಸತ್ತೆ? ಬಂದು ಎತ್ಕೋ ಮಗೂನ! ಅಳ್ತಾ ಇರೋದು ಕೇಳಿಸೊಲ್ಲ?”
ಆಕೆ ಹೊರಗೆ ಬರಲಿಲ್ಲವೆಂದು ಪುಟ್ಟಣ್ಣ ಗದರಿದ:
“ಸುನಂದಾ! ನಾನು ಹೇಳಿದ್ದು ಕೇಳಿಸ್ತೋ ಇಲ್ವೋ?”
ಸುನಂದಾ ಹೊರಗೆ ಬಂದು ಮಗುವನ್ನೆತ್ತಿಕೊಂಡಳು. ತಾಯಿಯ ಕೈ ಆಸರೆ
ದೊರೆತೊಡನೆಯೇ ಮಗು ಸುಮ್ಮನಾಯಿತು.
ದಿನವೆಲ್ಲಾ ಸುನಂದಾ ಸಿದ್ಧತೆ ಮಾಡಿಕೊಂಡಿದ್ದುದು ಅಷ್ಟು ಸುಲಭವಾಗಿ ವಿಫಲ
ವಾಗಿತ್ತು. ಪ್ರತಿ ಸಲವೂ ಹಾಗೆಯೇ. ಯಾವಾಗಲೂ ಯಾವ ಪ್ರಯಾಸವೂ
ಇಲ್ಲದೆ ಆತ ಜಯಶಾಲಿಯಾಗುತ್ತಿದ್ದ.
ಮಗುವನ್ನೆತ್ತಿಕೊಂಡು ಒಳಕ್ಕೆ ಹೊರಟು ಹೋಗೋಣವೆಂದಿತು ಸುನಂದೆಯ
ಮನಸ್ಸು. ಅನುದಿನದ ಆ ದ್ವಂದ್ವದಲ್ಲಿ ಎಂದಿನಂತೆ ಈ ಸಲವೂ ವಿವೇಕ ನಕ್ಕಿತು...
ಹೇಡಿಯಾಗಬಾರದೆಂದು ಸುನಂದಾ ಬೀಗಿದ ಮುಖ ತೋರಿಸುತ್ತ ಅಲ್ಲೇ ನಿಂತಳು.
ಆಕೆ ನಿಂತುದನ್ನು ಕಂಡು ಪುಟ್ಟಣ್ಣ ಪೆಚ್ಚಾದ.
ಆದರೆ ಮರುಕ್ಷಣವೆ ಮಾತಿನ ವೈಖರಿಯನ್ನು ಬದಲಾಯಿಸಿ ಆತ ಕೇಳಿದ:
“ಬಂದಿದ್ದರೇನು ನಿನ್ನ ಸ್ನೇಹಿತರು?”
ಸ್ನೇಹಿತರು ಎಂಬ ಪದ ಯಾರಿಗೆ ಸಂಬಂಧಿಸಿ ಉಪಯೋಗವಾಗಿತ್ತೆಂಬುದು
ಸುನಂದೆಗೆ ತಿಳಿಯಿತು. ಆದರೂ ಆಕೆ ಕೇಳಿದಳು:
“ಯಾವ ಸ್ನೇಹಿತರು?”
“ಅವರೇ ಕಣೇ....ಮನೆ ಮಾಲಿಕ, ಅಗಸರವನು, ಹಾಲಿನವನು....”
ಸುನಂದಾ ತುಟಿ ಕಚ್ಚಿ ಅಂದಳು:
“ಬಂದಿದ್ದರು! ಗಂಡ ಬರೋ ಹೊತ್ತಾಯ್ತೂಂತ ಕಳಿಸ್ಬಿಟ್ಟೆ!”
ಆ ದಿಟ್ಟತನ ಮತ್ತು ವ್ಯಂಗ್ಯ! ಪುಟ್ಟಣ್ಣ ಅದನ್ನು ನಿರೀಕ್ಷಿಸಿಯೇ ಇರಲಿಲ್ಲ.
ಅರೆಕ್ಷಣ ಆತ ಅಪ್ರತಿಭನಾದ. ಆದರೂ ಅದನ್ನು ತೋರಿಸಿಕೊಳ್ಳದೆ ಹೆಂಡತಿಗೆ ಬೆನ್ನು
ಮಾಡಿ ಕೋಟಿನ ಜೇಬಿನಿಂದ ನೋಟಿನ ಕಟ್ಟನ್ನು ಹೊರತೆಗೆದ. ಹತ್ತರ ಐದು
ನೋಟುಗಳನ್ನು ತಾನಿಟ್ಟುಕೊಂಡು, ಉಳಿದ ನೂರಇಪ್ಪತ್ತೈದರ ಕಟ್ಟನ್ನು ಸುನಂದೆಯ
ಕಡೆಗೆ ಎಸೆದ.
“ತಗೋ. ಸಾಲ ಸಂದಾಯಮಾಡಿ ನಿನ್ನ ಮಾನ ಉಳಿಸ್ಕೊ!”
ಆಕೆಯ ಮುಖಮುದ್ರೆ ನಿಶ್ಚಲವಾಗಿತ್ತು. ಅಲ್ಲಿ ಯಾವ ಭಾವ ವಿಕಾರವನ್ನೂ
ಕಾಣದೆ ಆತ ನಿರಾಶನಾದ.
ಆ ನಿರಾಶೆಯಿಂದ ಸಿಟ್ಟು ಕೆರಳಿ, ಉರಿಮುಖದಿಂದಲೇ ಪುಟ್ಟಣ್ಣ ಚಪ್ಪಲಿ ಮೆಟ್ಟಿ
ಕೊಂಡು ಬೀದಿಗಿಳಿದ.
ತಾನು ಆಡುತ್ತಿದ್ದುದೇನೆಂಬುದನ್ನು ಸರಿಯಾಗಿ ಯೋಚಿಸುವುದಕ್ಕೆ ಮುಂಚೆಯೇ