ಪುಟ:ಪಾಲಿಗೆ ಬಂದ ಪಂಚಾಮೃತ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

37

ಪಾಲಿಗೆ ಬಂದ ಪಂಚಾಮೃತ

ಸುನಂದಾ ಕೇಳಿದಳು:
“ಊಟಾನೂ ಅವರ ಮನೇಲೇ ಮಾಡ್ತೀರಾ?"
'ಅವಳ ಮನೆ' ಎಂದು ನಾಲಗೆಯ ತುದಿಯವರೆಗೂ ಬಂದುದು 'ಅವರ ಮನೆ'
ಯಾಗಿತ್ತು.
ಪುಟ್ಟಣ್ಣ, ತಿವಿಯುವಂತೆ ಬಂದ ಆ ಪ್ರಶ್ನೆಯನ್ನು ಕೇಳಿ ತಬ್ಬಿಬ್ಬಾದ. ಆದರೆ
ಬಿರುಸು ಮುಖವಾಡವನ್ನು ಸಡಿಲ ಬಿಡದೆ ಹೇಳಿದ:
“ಹೌದು. ನನಗಾಗಿ ಕಾಯ್ಬೇಡ.”

****

ಹಾಗೆ ಆ ಹಂತವನ್ನಡರಿತು ವಿರಸದ ಪ್ರಕರಣ.
ಒಬ್ಬಳೇ ಉಳಿದಾಗ ಸುನಂದಾ ಯೋಚಿಸಿದಳು: ಸರಿಯಾಯಿತೆ ತಾನು
ಮಾಡಿದ್ದು? ಹಾಗೆ ಪ್ರತ್ಯುತ್ತರ ಕೊಟ್ಟುದು ಸರಿಯಾಯಿತೆ?
ಸರಿ_ಎನ್ನುವುದರೊಡನೆ ಸಂದೇಹ ಹೆಡೆಯಾಡಿಸಿತು: ಕೊನೆಯ ಪ್ರಶ್ನೆಯನ್ನು
ಕೇಳದೇ ಇದ್ದಿದ್ದರೆ ಮೇಲಾಗುತಿತ್ತೋ ಏನೋ. ಆ ಪ್ರಶ್ನೆಯನ್ನು ತಾನಾಗಿಯೇ
ಕೇಳಿ ಅವರು 'ಅಲ್ಲೇ' ಊಟಮಾಡುವಂತೆ ಎಡೆಕೊಟ್ಟ ಹಾಗಾಯಿತೆ? ಅಥವಾ
ಊಟವೇ ಇಲ್ಲದೆ ಬಂದು ಅವರು ಉಪವಾಸ ಮಲಗುವರೋ ಏನೋ. ಮೊದಲೇ
ಆತ ಸ್ವಾಭಿಮಾನಿ. ಈಗ ಕಾರಣವಿಲ್ಲದೆಯೇ ಅಂಟಿಕೊಂಡಿದ್ದ ಹಟಮಾರಿತನ
ಬೇರೆ.......
ಆಕೆ ಆಡಿದ್ದು ಅಸಹಾಯತೆಯಿಂದ ಹುಟ್ಟಿದ ಬಿರುನುಡಿ. ಅದರ ಬಗೆಗೆ
ಇನ್ನೇನೂ ಮಾಡುವಂತಿರಲಿಲ್ಲ...
ಆದರೆ ಮೂಲ ತಪ್ಪು ಯಾರದು? ವಯಸ್ಸಿನಲ್ಲಿ ದೊಡ್ಡವರು, ಹೆಚ್ಚು ತಿಳಿವಳಿಕೆ
ಉಳ್ಳವರು ಯಾರು? ಆಕೆಯ ಸಂಕಟವನ್ನು ತಿಳಿದು ಸರಿಯಾಗಿ ವರ್ತಿಸಬೇಕಾದವರು
ಯಾರು?
ಮಗು ಅಷ್ಟೊಂದು ಅಳುತ್ತಿದ್ದರೂ ಆತ ಎತ್ತಿಕೊಳ್ಳಲೇ ಇಲ್ಲವಲ್ಲ!
ಸ್ನೇಹಿತರು ಬಂದಿದ್ದರೆ?__ಅಂತೆ. ಎಂಥ ಪ್ರಶ್ನೆ! ಅದಕ್ಕೆ ತಾನು ಕೊಟ್ಟ
ಉತ್ತರ ಸರಿಯಾಗಿತ್ತು.
ವಾಸ್ತವವಾಗಿ ಆ ಹಗಲೆಲ್ಲ ಯಾರೂ ಬಂದಿರಲಿಲ್ಲ. ಪ್ರಾಯಶಃ ಗಂಡ ಆ ದಿನ
ಕೆಲಸಕ್ಕೆ ಹೋಗದೆ, ಹಣ ತಂದು ಪ್ರತಿಯೊಬ್ಬರಿಗೂ ತಲಪಿಸಿಯಾಯಿತೇನೋ,
ಎಂದು ಕೂಡ ಸುನಂದಾ ಯೋಚಿಸಿದ್ದಳು. ಅಂಥದೇನನ್ನೂ ಆತ ಮಾಡಿರಲಿಲ್ಲ.
ಆದರೆ ಸದ್ಯಃ ಹಣ ಬಂದಿತ್ತು.
....ಪುಟ್ಟಣ್ಣ ಎಸೆದಿದ್ದ ನೋಟಿನ ಕಟ್ಟನ್ನೆತ್ತಿಕೊಂಡು ಹೊರಬಾಗಿಲು ಮರೆ
ಮಾಡಿ ಸುನಂದಾ ಹಜಾರಕ್ಕೆ ನಡೆದಳು. ಮಗುವಿಗೆ ಮೊಲೆಯೂಡಿಸಿ ಅಲ್ಲಿಯೇ ಕೆಳಕ್ಕೆ
ಆಡಲು ಬಿಟ್ಟು, ನೋಟುಗಳನ್ನೆಣಿಸಿದಳು. ಕೊಡಬೇಕಾದುದೆಲ್ಲವನ್ನೂ ಲೆಕ್ಕ