ಪುಟ:ಪಾಲಿಗೆ ಬಂದ ಪಂಚಾಮೃತ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

45

ಕುಳಿತಳು.
...ಆತ ಸ್ವಲ್ಪ ಹೊತ್ತು ಹಾಸಿಗೆಯ ಮೇಲೆ ಚಡಪಡಿಸಿದ. ಹೊಸ ವ್ಯಕ್ತಿತ್ವ
ಬಿರುಕು ಬಿಟ್ಟು ಕುಸಿಯುತ್ತಿದ್ದಂತೆ ಅವನಿಗೆ ಭಾಸವಾಯಿತು. ಒಮ್ಮೆಲೆ ಭಯ
ವಾಯಿತು ಪುಟ್ಟಣ್ಣನಿಗೆ. ಎದ್ದು ಮಗುವನ್ನು ನೋಡಬೇಕು, ಡಾಕ್ಟರಲ್ಲಿಗೆ ಓಡಬೇಕು,
ಎಂದು ತೋರಿತು. ಆದರೆ ಅಂತಹ ಸ್ಥಿತಿಯಲ್ಲೂ ಆತ ಮನಸ್ಸನ್ನು ಬಿಗಿ ಹಿಡಿದ.
ಇದು ತನ್ನ ಸತ್ವಪರೀಕ್ಷೆ: ಸತ್ವ ಪರೀಕ್ಷೆಯಲ್ಲಿ ತನಗೆ ಜಯವಾಗಬೇಕು-ಎಂದುಕೊಂಡ.
... ಕೆದರಿದ ಕೂದಲಿನಿಂದ, ಕಣ್ಣಲ್ಲಿ ಕಣ್ಣಿಟ್ಟು, ಮಗುವನ್ನು ನೋಡಿಕೊಳ್ಳು
ತ್ತಿದ್ದ ಸುನಂದೆಯೂ ಸ್ವರವೆತ್ತದೆಯೇ ಗೋಳಾಡಿದಳು. 'ನನ್ನ ಪಾಲಿಗಿದೊಂದು
ಸತ್ವಪರೀಕ್ಷೆ. ಇದರಲ್ಲಿ ನಾನು ಸೋತು ಸಾಯಬೇಕು; ಇಲ್ಲವೆ ಗೆದ್ದು ಬದುಕ
ಬೇಕು.'

****

ಬೆಳಗಾಯಿತು. ಕುಳಿತೇ ಇದ್ದ ಸುನಂದೆಗೆ ದೀಪದ ಬದಲು ಸೂರ್ಯನ
ಬೆಳಕು ದೊರೆಯಿತು.
ಪುಟ್ಟಣ್ಣನೂ ಬೇಗನೆ ಎದ್ದ. ಸುನಂದಾ ಬಚ್ಚಲು ಮನೆಗೆ ಹೋಗಿದ್ದಾಗ ಆತ
ಮಗುವಿನ ಬಳಿ ಸಾರಿ ಅದನ್ನೊಮ್ಮೆ ಮುಟ್ಟಿ ನೋಡಿದ. ಹೇಗೊ ಹೇಗೋ
ಆಯಿತು. 'ಹೀಗೆಯೇ ಈ ಮಗು ಕಣ್ಣು ಮುಚ್ಚಿಕೊಳ್ಳುವುದೇನೋ' ಎನ್ನಿಸಿತು.
'ಹಾಗೇನಾದರೂ ಆದರೆ ಅದೂ ಸರಿಯೆ,' ಎಂದು ಮನಸಿನಲ್ಲೆ ಪುಟ್ಟಣ್ಣ ಅಂದು
ಕೊಂಡ. ಜ್ವರದಿಂದ ಕುದಿಯುತ್ತಿದ್ದ ಆ ಮಗುವನ್ನು ನೋಡಲಾರದೆ, ಆತ ಕೊಠಡಿ
ಯತ್ತ ನಡೆದ.
ಮಗುವನ್ನು ಆತ ನೋಡುತ್ತಿದ್ದುದನ್ನು ಕಂಡಿದ್ದಳು ಸುನಂದ. ಆ ನಿರಾಶೆ
ಯಲ್ಲೂ ಹುಚ್ಚು ಮನಸ್ಸು ಆಡಿತು:
'ನನ್ನ ಪಾಲಿನ ದೇವರು ಕಣ್ಣು ತೆರೆದ ಅಂತ ತೋರುತ್ತೆ.'
ಇನ್ನೇನು, ಆತ ಬಟ್ಟೆ ಹಾಕಿಕೊಂಡು ಡಾಕ್ಟರನ್ನು ಕರೆಯಲು ಹೋಗಬಹುದು
ಎಂದುಕೊಂಡಳು ಆಕೆ.
ಆದರೆ ಎಣಿಕೆ ತಪ್ಪಾಗಿತ್ತು. ಪುಟ್ಟಣ್ಣ ಎಂದಿನಂತೆಯೆ ಮುಖ ಕ್ಷೌರ ಮಾಡಿದ.
ಸುನಂದಾ ಮಾಡಿಕೊಟ್ಟ ಕಾಫಿಯನ್ನೂ ಕುಡಿದ. ನೀರು ಕಾಯುವುದರ ಹಾದಿ
ನೋಡದೆ, ಹಸಿಬಿಸಿ ನೀರನ್ನೇ ಸುರಿದುಕೊಂಡು ಸ್ನಾನ ಮಾಡಿದ.
ಆಗಲೂ ಸುನಂದೆಯ ಮನಸ್ಸು ಹೇಳಿತು.
'ಸಂಶಯವೇ ಇಲ್ಲ. ಈ ಅವಸರವೆಲ್ಲ ಡಾಕ್ಟರ ಬಳಿಗೆ ಹೋಗುವುದಕ್ಕೇ
ಇರಬೇಕು.'
ಆತ ಬೇಗ ಬೇಗನೆ ಬಟ್ಟೆ ಹಾಕಿಕೊಂಡು ಹೇಳಿದ:
“ಮಧ್ಯಾಹ್ನದ ಊಟ ಕಳಿಸ್ಬೇಡ.”