ಪುಟ:ಪಾಲಿಗೆ ಬಂದ ಪಂಚಾಮೃತ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

46

ಕನಸು

ಥಟಕ್ಕನೆ ಸುನಂದಾ ಕೇಳಿದಳು:
“ಆಫೀಸಿಗೆ ಹೋಗಲ್ವೆ ಇವತ್ತು?”
ಪುಟ್ಟಣ್ಣನ ತುಟಿಗಳು ಮುರುಟಿಕೊಂಡು ಅಲ್ಲೊಂದು ವಕ್ರನಗೆ ಮೂಡಿತು.
“ಹೋಗ್ದೆ! ಊಟ ಬೇಡ ಅಂದೆ. ನೀನು ಮಾಡ್ಕೊಂಡು ಊಟ ಮುಗಿಸು.”
ಹೊರಕ್ಕಿಳಿಯುತ್ತಿದ್ದ ಬೂಟುಗಳ ಸದ್ದು.
'ಡಾಕ್ಟರು' ಎಂಬ ಪದ ಸುನಂದೆಯ ನಾಲಿಗೆಯ ತುದಿಗೆ ಬಂತು. 'ಸಾಯಂಕಾಲ
ಬೇಗ್ನೆ ಬಂದ್ಬಿಡ್ತೀರಾ?' ಎನ್ನುವ ಪ್ರಶ್ನೆಯೂ ರೂಪುಗೊಂಡಿತು. ಆದರೆ ಗಂಟಲಿ
ನಿಂದ ಯಾವ ಸ್ವರವೂ ಹೊರಡಲಿಲ್ಲ.
....ಬಂದಿದ್ದವರನ್ನೆಲ್ಲ ಹಿಂದಿನ ಸಂಜೆಯಷ್ಟೆ ಕಳುಹಿಕೊಟ್ಟಿದ್ದ ರಾಧಮ್ಮ,
ರಾಮಯ್ಯ ಕೆಲಸಕ್ಕೆ ಹೋದೊಡನೆಯೇ ಸುನಂದೆಯ ಮನೆಗೆ ಬಂದರು. ಹಿಂದಿನ
ದಿನ ಕೇಳಿದ್ದಾಗ “ಮಗೂಗೆ ಮೈ ಹುಷಾರಿಲ್ಲ” ಎಂದಷ್ಟೆ ಸುನಂದಾ ಹೇಳಿದ್ದಳು.
ಆದರೆ ಪರಿಸ್ಥಿತಿಯ ಗಭೀರತೆ ಎಷ್ಟಿರಬಹುದೆಂದು ರಾಧಮ್ಮ ಊಹಿಸಿರಲಿಲ್ಲ.ಅವರ
ಹೃದಯದೊಳಕ್ಕೆ ಪಿಚ್ಚೆನ್ನಿಸಿತು. ಮಗು ಸಾವು ಬದುಕುಗಳ ನಡುವೆ ಉಯ್ಯಾಲೆ
ಯಾಡುತ್ತಿತ್ತೆಂಬುದು ಸ್ಪಷ್ಟವಾಗಿ ಅವರಿಗೆ ಅಧೈರ್ಯವಾಯಿತು. ಆದರೂ ಮುಖದ
ಭಾವದಿಂದ ಒಂದನ್ನೂ ಅವರು ತೋರಗೊಡಲಿಲ್ಲ. ಸುನಂದೆಯನ್ನು ನೋಡುತ್ತ
ಅವರು ಕೇಳಿದರು:
“ನಿಮ್ಮ ಯಜಮಾನರೆಲ್ಲಿ? ಡಾಕ್ಟರನ್ನ ಕರೆತರೋಕೆ ಹೋಗಿದ್ದಾರಾ?”
ಇರಲಾರದೆಂಬ ಸಂದೇಹವಿದ್ದರೂ ಅದು ಖಚಿತವಾಗಲೆಂದು ಅವರು ಹಾಗೆ
ಅಂದರು.
ಸುನಂದಾ ಉತ್ತರ ಕೊಡಲಿಲ್ಲ. ಅವರ ಭುಜದ ಮೇಲೆ ಮುಖವಿಟ್ಟು ಗೋಳೋ
ಎಂದು ಅತ್ತಳು. ಅಳುತಳುತ ಆಕೆಯೆಂದಳು:
“ಇಲ್ಲ ರಾಧಮ್ನೋರೆ. ಡಾಕ್ಟರನ್ನ ಕರೆಯೋಕೆ ಯಾರೂ ಹೋಗಿಲ್ಲ.”
ನೆರೆಮನೆಯಾಕೆಯ ಸಂಸಾರದ ಕಥೆಯನ್ನು ಬಹುಮಟ್ಟಿಗೆ ಆಗಲೆ ಊಹಿಸಿ
ಕೊಂಡಿದ್ದ ರಾಧಮ್ಮ, ಆ ವಿಷಯ ಮತ್ತೇನೂ ಪ್ರಸ್ತಾಪಿಸ ಬಯಸದೆ, ಅಳುತ್ತಿದ್ದ
ಸುನಂದೆಗೆ ಧೈರ್ಯ ನೀಡಿದರು:
“ಅಳಬೇಡಿ ಸುನಂದಾ. ಮಗುವಿಗೇನೂ ಆಗೊಲ್ಲ. ಬರೇ ಜ್ವರ ಅಷ್ಟೆ.
ಡಾಕ್ಟರಲ್ಲಿಗೆ ಕರಕೊಂಡು ಹೋಗೋಣ.'
“ನೀವೂ ಬರ್ತೀರಾ ರಾಧಮ್ಮ?”
“ಬರ್ತೀನಿ. ನನ್ನ ಮಕ್ಕಳಿಗೆ ಹೀಗೆಲ್ಲ ಆಗಿಯೇ ಇರ್ಲಿಲ್ಲ ಅಂದ್ಕೊಂಡ್ರಾ? ಇದೆಲ್ಲ
ಇರೋದೇನೇ....”
ಮಕ್ಕಳಿಗೆ ಆಗಿರಬಹುದು. ಆದರೆ ಗಂಡನಿಗೂ ಹಾಗೆ ಆಗಿತ್ತೆ? -ತನ್ನ ಗಂಡನಿಗೆ
ಆದ ಹಾಗೆ?