ಪುಟ:ಪಾಲಿಗೆ ಬಂದ ಪಂಚಾಮೃತ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

48

ಕನಸು

ಮಲಗಿಸಿದಳು.
ರಾಧಮ್ಮ ಕೇಳಿದರು:
“ಈ ಗಲಾಟೇಲಿ ಅಡುಗೆ ಏನಮ್ಮಾ ಮಾಡ್ತೀರ ನೀವು?”
“ಅವರು ಇವತ್ತು ಊಟ ಕಳಿಸೋದು ಬೇಡ ಅಂದ್ರು ರಾಧಮ್ಮ.”
“ಹಾಗಂದರಾ? ಪುಣ್ಯವಂತ. ಬಹಳ ಒಳ್ಳೇ ಕೆಲಸ ಮಾಡಿದ್ರು. ನೀವು
ಮಗೂನ ನೋಡ್ಕೊಂಡಿರಿ ಸುನಂದಾ. ನಾನು ಹೋಗಿ ಒಂದಿಷ್ಟು ಅಡುಗೆ ಮಾಡ್ತೀನಿ.
ಇವತ್ತು ನೀವು ನಮ್ಮಲ್ಲೇ ಊಟ ಮಾಡುವಿರಂತೆ.”
ವಿದ್ಯಾವತಿಯಾದ ಸುನಂದಾ ಅಭ್ಯಾಸ ಬಲದಿಂದ ಅಂದಳು:
“ಸುಮ್ಮನೆ ನಿಮಗೆ ತೊಂದರೆ ಯಾತಕ್ಕೆ__"
"ಮಹಾ ತೊಂದರೆ. ಸಾಕು ಬಿಡಿ. ಸುಮ್ನಿರಿ ನೀವು!”
ಸುನಂದಾ ಏನನ್ನೂ ಎದುರು ಹೇಳದೆ ಸುಮ್ಮನಾದಳು.

****

ಹೊತ್ತು ಕಳೆಯಿತು.
ರಾಧಮ್ಮ ಬಡಿಸಲೆಂದು ಊಟ ತಂದಿರಿಸಿದ ಮೇಲೆ, ಅವರ ಆರೈಕೆಯಲ್ಲಿ
ಮಗುವನ್ನು ಬಿಟ್ಟು, ಸುನಂದಾ ಸ್ನಾನ ಮಾಡಿ ಬಂದಳು.
ದೇಹದ ಬಳಲಿಕೆಯಿಂದ ಆಹಾರ ರುಚಿಸದೇ ಹೋದರೂ, ಹಿರಿಯಕ್ಕನ ಹಾಗೆ
ಒತ್ತಾಯಿಸುತ್ತಿದ್ದ ರಾಧಮ್ಮ ಬಡಿಸಿದ್ದನ್ನೆಲ್ಲ ಆಕೆ ಉಂಡಳು.
ಊಟ ಮುಗಿಸಿ ರಾಧಮ್ಮನನ್ನು ನೋಡುತ್ತ ಸುನಂದಾ ಹೇಳಿದಳು:
“ನನಗೆ ತಂಗಿ ಇದಾಳೆ ರಾಧಮ್ಮ. ಅಕ್ಕ ಇಲ್ಲಾಂತ ಕೊರಗು ಇರ್ತಿತ್ತು. ಇನ್ನು
ಆ ಕಸಿವಿಸಿ ಇಲ್ಲ.”
ರಾಧಮ್ಮ ಆ ಮಾತಿಗೆ ಪ್ರತ್ಯುತ್ತರ ಕೊಡಲಿಲ್ಲ.
ಆಕೆಯೂ ಮನೆಗೆ ಹೋಗಿ ಊಟ ಮಾಡಿ ಬಂದರು.
ರಾತ್ರೆ ನಿದ್ದೆಗೆಟ್ಟಿದ್ದ ಸುನಂದಾ, ರಾಧಮ್ಮ ಒತ್ತಾಯಿಸಿದ ಮೇಲೆ ಸ್ವಲ್ಪ
ಹೊತ್ತು ನಿದ್ದೆ ಹೋದಳು.
ಮಗುವಿನ ಜ್ವರ ಹೆಚ್ಚಾಗುವ ಲಕ್ಷಣಗಳೇನೂ ತೋರಲಿಲ್ಲ.
ಸುನಂದೆ ಎಚ್ಚರಗೊಂಡ ಮೇಲೆ ರಾಧಮ್ಮ ಕೇಳಿದರು:
“ಒಂದಿಷ್ಟು ಕಾಫಿ ಮಾಡ್ಕೊಡೀಮ್ಮ. ಇಷ್ಟೆಲ್ಲ ಸಹಾಯ ಮಾಡಿದ್ದಕ್ಕೆ ಸಂಬಳ
ಬೇಡ್ವೆ ನಂಗೆ?”
ಸುನಂದಾ ಕಾಫಿ ಮಾಡುತ್ತಿದ್ದಂತೆ ರಾಧಮ್ಮ, ಬಹಳ ದಿನಗಳಿಂದ ಕೇಳ
ಬೇಕೆಂದಿದ್ದ ಮಾತನ್ನು ಮೆಲ್ಲನೆ ಪ್ರಸ್ತಾಪಿಸಿದರು.
“ನಿಮ್ಮ ಯಜಮಾನರು ಎಷ್ಟು ಹೊತ್ತಿಗೆ ಬರ್ತಾರೆ ಸಾಯಂಕಾಲ?”
ಸುನಂದೆಯೂ ಬಹಳ ದಿನಗಳಿಂದ ತಾನು ಹೇಳಬೇಕೆಂದಿದ್ದುದನ್ನು ಬರಿದು