ಪುಟ:ಪಾಲಿಗೆ ಬಂದ ಪಂಚಾಮೃತ.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

51

“ಬೇಡಿ ರಾಧಮ್ಮ. ನಮ್ಮವರಿಗೆ ಸೀಮೆಬದನೆಕಾಯಿ ಅಂದರೆ ಅಷ್ಟಕ್ಕಷ್ಟೆ.
ಆಲೂಗಡ್ಡೆ ಇದೆ. ಪಲ್ಯ ಮಾಡ್ತೀನಿ. ಹಾಗೇ ಸಾರೂ ಮಾಡ್ತೀನಿ.”
“ನಿಮ್ಮಿಷ್ಟ. ಹುಡುಗರು ಬಂದರೇನೋ ನೋಡ್ಕೊಂಡು ಆಮೇಲೆ ಬರ್ತೀ
ನಮ್ಮ.”
ರಾಧಮ್ಮ ಹೊರಟು ಹೋದ ಮೇಲೆ ಸುನಂದಾ, ಮಗುವಿನ ಮೈಯೊರೆಸಿ,
ಅರಿವೆ ಬದಲಾಯಿಸಿ, ಒಲೆ ಹಚ್ಚಿದಳು. ರಾಧಮ್ಮನೊಡನೆ ತನ್ನ ದುಗುಡವನ್ನೆಲ್ಲ
ತೋಡಿಕೊಂಡಾಗಲೇ ಸಂಕಷ್ಟ ಅರ್ಧಕ್ಕರ್ಧ ನಿವಾರಣೆಯಾದ ಹಾಗೆ ಆಕೆಗೆ ತೋರಿತ್ತು.
ಇನ್ನೊಂದು ಮಾನವ ಜೀವ ಒದಗಿಸಿ ಕೊಟ್ಟ ಸ್ನೇಹಚೇತನದ ಫಲವಾಗಿ ಆಕೆ ಚೇತರಿಸಿ
ಕೊಂಡಿದ್ದಳು. ಆ ಪರಿಸ್ಥಿತಿಯೊಡನೆ, ಮಗು ಗಂಡಾಂತರದಿಂದ ಪಾರಾಯಿತೆಂಬ
ಮಹಾ ಸಮಾಧಾನವೂ ಸೇರಿ, ಸರಾಗವಾಗಿ ಉಸಿರಾಡುವುದು ಸಾಧ್ಯವೆನಿಸಿತು
ಸುನಂದೆಗೆ.
ಆಕೆ ಆಸಕ್ತಿಯಿಂದ ಅಡುಗೆ ಮಾಡಿದಳು.
ಆದರೆ ಸಂಜೆಯಾಗಿ ಕತ್ತಲಾದರೂ ಗಂಡ ಬರಲಿಲ್ಲ. ಕತ್ತಲಾಗಿ ಹೊತ್ತಾದರೂ
ಆತ ಕಾಣಿಸಲಿಲ್ಲ.
ಆಕೆ ಹಜಾರದಿಂದ ಬಾಗಿಲವರೆಗೆ ಹಲವಾರು ಸಾರೆ ಹೋಗಿ ಬಂದಳು. ನಿಮಿಷ
ಗಳು ಕಳೆದು ಗಂಟೆಗಳು ರೂಪುಗೊಂಡು ಒಂದರ ಮೇಲೊಂದು ಉರುಳಿಹೋದಂತೆ,
ಆಕೆಯ ಸಂಕಟ ಹೆಚ್ಚಿತು.
ರಾಧಮ್ಮ ತಮ್ಮ ಮನೆಯ ಕಿಟಿಕಿಯ ಎಡೆಯಿಂದ, ಸುನಂದಾ ಪಡುತ್ತಿದ್ದ
ಅವಸ್ಥೆಯನ್ನು ನೋಡಿದರು. ಮನೆಯಲ್ಲಿ ಎಲ್ಲರ ಊಟವಾಗಿ ಮಕ್ಕಳು ಮಲಗಿದ
ಮೇಲೆ, ಸುನಂದೆಯನ್ನು ನೋಡಿ ಬರುವೆನೆಂದು ಗಂಡನಿಗೆ ಹೇಳಿ, ರಾಧಮ್ಮ ಹೊರಟು
ಬಂದರು.
ಸುನಂದಾ ಕೇಳಿದಳು:
“ಗಂಟೆ ಎಷ್ಟಾಯ್ತು ರಾಧಮ್ನೋರೆ?”
ಒಂಭತ್ತೂವರೆ ದಾಟಿತ್ತು ಆಗಲೆ. ಆದರೆ ಹಾಗೆ ಹೇಳಿ ಆಕೆಯ ಮನಸ್ಸಿನ
ನೋವನ್ನು ಹೆಚ್ಚಿಸಲಾರದೆ ರಾಧಮ್ಮ ಸುಳ್ಳಾಡಿದರು.
“ಎಂಟು ದಾಟಿತೂಂತ ಕಾಣುತ್ತೆ.”
“ಅಷ್ಟೇನೇ! ಬಹಳ ಹೊತ್ತಾಯ್ತೇನೋ ಅಂದ್ಕೊಂಡಿದ್ದೆ. ಬಸ್ಸುಗಳು ಇನ್ನೂ
ಓಡಾಡ್ತಲೇ ಇವೆ ಹಾಗಾದರೆ.”
ಕೊನೆಯ ಬಸ್ಸು ಬಂದು ಹೋದುದನ್ನೂ ಅದರಲ್ಲಿ ಸುನಂದೆಯ ಗಂಡ ಬರದೆ
ಇದ್ದುದನ್ನೂ ಗಮನಿಸಿದ್ದ ರಾಧಮ್ಮ ಮಾತನಾಡಲಿಲ್ಲ.
ಮಗುವಿನ ಮೈ ಮುಟ್ಟಿ ನೋಡಿ, ಹಾಸಿಗೆಯ ಬಳಿ ಕುಳಿತು, ಅವರೆಂದರು:
“ಮಗೂಗೆ ಔಷಧಿ ಕುಡಿಸಿದಿರಾ?”