ಪುಟ:ಪಾಲಿಗೆ ಬಂದ ಪಂಚಾಮೃತ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

55

“ಹೊಡೆದು ಸಾಕಾಗಿ ಮಲಕೊಂಡನೇನೋ”
-ಎಂದರು ರಾಧಮ್ಮ.
“ಹಾಳಾಗಲಿ ಬಿಡು, ಅವರವರ ಪಾಪ ಅವರವರ ತಲೆಯ ಮೇಲೆ.”
-ಎಂದು ಹೇಳಿ ರಾಮಯ್ಯನವರು ಮತ್ತೆ ಹಾಸಿಗೆಗೆ, ಮುಸುಕಿನ ರಕ್ಷಣೆಗೆ,
ನಡೆದರು.
ಮತ್ತೂ ಕಿಟಿಕಿಯ ಬಳಿಯೇ ನಿಂತಿದ್ದ ಹೆಂಡತಿಗೆ ಅವರು ಹೇಳಿದರು:
“ಬಾ ರಾಧಾ. ಎಷ್ಟು ಹೊತ್ತೂಂತ ಅಲ್ಲೇ ನಿಂತಿರ್ತೀಯಾ? ಬಾ ಮಲಕೋ.”

ರಾಧಮ್ಮನ ಮನೆಯ ಮುಂದೆ, ಹರಕಲು ಬಟ್ಟೆ ತೊಟ್ಟಿದ್ದ, ಕರಿಯ ಮೈಯ,
ಗಂಟುಮೂಟೆ ಸಹಿತವಾದ ಸಂಸಾರವೊಂದು ಬಂದು ನಿಂತಿತ್ತು. ಆ ಮಾತು ಗದ್ದಲ
ಕೇಳಿ ಸುನಂದಾ ಮಗುವನ್ನೆತ್ತಿಕೊಂಡು ಹೊರಬಂದಳು. ಗುಣಹೊಂದಿ ಹಸನ್ಮುಖಿ
ಯಾಗಿದ್ದ ಮಗುವೂ ಅಂಗಳದಲ್ಲಿ ನೆರೆದಿದ್ದವರ ಬಗೆಗೆ ಕುತೂಹಲ ತೋರಿತು.
ರಾಧಮ್ಮ ಕರೆದರು:
“ಇಲ್ಲಿಗ್ಬನ್ನಿ ಸುನಂದಾ. ಇವರೇನು ಮಾತಾಡ್ತಿದಾರೋ ಸರಿಯಾಗಿ ಅರ್ಥವೇ
ಆಗೊಲ್ಲ.”
ಸುನಂದಾ ಹತ್ತಿರ ಬಂದಳು. ಆ ಜನರೆಲ್ಲ ತಮಿಳು ಮಾತನಾಡುತಿದ್ದರು.
“ನನಗಾದರೂ ಎಲ್ಲಿ ಬರುತ್ತೇಂತ ಅವರ ಭಾಷೆ?”
“ಸರಿ ಹೋಯ್ತು!”
ಭಾಷೆ ತಿಳಿಯದೇ ಹೋಯಿತೆಂದು ಮನುಷ್ಯರು ಒಬ್ಬರನ್ನೊಬ್ಬರು ಅರ್ಥ
ಮಾಡಿಕೊಳ್ಳದೇ ಇದ್ದ ಕಾಲ ಯಾವುದು? ಅಲ್ಲದೆ, ಇಲ್ಲಿ ಪರಸ್ಪರರಿಗೆ ಭಾಷೆ ಸ್ವಲ್ಪ
ಸ್ವಲ್ಪವಾದರೂ ಅರ್ಥವಾಗುತ್ತಿತ್ತು.
ರಾಧಮ್ಮನ ಮನೆಯ ಮೆಟ್ಟಲ ಮೇಲೆ ಕುಳಿತು ಆ ಹೆಂಗಸು ಹಾವಭಾವ
ಗಳೊಡನೆ ಆ ಎರಡೂ ಮನೆಗಳ ಎಡಮಗ್ಗುಲಿಗಿದ್ದ ಖಾಲಿ ನಿವೇಶನದತ್ತ ಬೊಟ್ಟು
ಮಾಡುತ್ತ ಹೇಳಿದಳು:
“ಅಲ್ಲಿ ಗುಡಿಸಲು ಹಾಕ್ಕೊಂಡಿರ್ತೀವಿ ಅಮ್ಮ. ನಾನು ಬಿಟ್ಟಿಯಾಗಿ ನಿಮ್ಮನೆ
ಚಾಕರಿ ಮಾಡ್ತೀನಿ. ಒಂದೆರಡು ತಿಂಗಳು ಇದ್ದು ಹೊರಟ್ಬಿಡ್ತೀವಿ."
ಅದನ್ನು ಅರ್ಥಮಾಡಿಕೊಂಡ ರಾಧಮ್ಮ ಹೇಳಿದರು:
“ನಾವು ಬಾಡಿಗೆ ಮನೆಯೋರು. ನಮ್ಮದಲ್ಲ ಆ ಸೈಟು. ಅಲ್ದೆ, ಮುನಿಸಿಪಾಲಿಟಿ