ಪುಟ:ಪಾಲಿಗೆ ಬಂದ ಪಂಚಾಮೃತ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

56

ಕನಸು

ಯವರು ಹಾಗೆಲ್ಲ ಗುಡಿಸಲು ಕಟ್ಟೋಕೆ ಬಿಡ್ತಾರಾ?”
ಸುನಂದೆಯತ್ತ ತಿರುಗಿ ಆಕೆಯೆಂದರು:
“ಬಿಡೊಲ್ಲ ಅಲ್ವೇನ್ರೀ ?”
“ಇಲ್ಲಾಂತ ತೋರುತ್ತೆ"
-ಎಂದಳು ಸುನಂದಾ, ರಾಧಮ್ಮನ ಮಾತಿಗೆ ಬೆಂಬಲವಾಗಿ, ಖಂಡಿತವಾಗಿ ತನಗೆ
ಗೊತ್ತಿರದೇ ಇದ್ದರೂ.
ಆದರೆ ಇಂತಹ ಎಡರುಗಳನ್ನೆಲ್ಲ ಹಿಂದೆ ಅನೇಕ ಸಲ ದಾಟಿ ಬಂದಂತಿತ್ತು ಆ
ಸಂಸಾರ. ಆ ಹೆಂಗಸು ಕನ್ನಡ ಮಾತುಗಳನ್ನು ಅರ್ಥಮಾಡಿಕೊಂಡು ಅಂದಳು:
“ಮುನಿಸಿಪಾಲಿಟೀದು ದೊಡ್ಡದಲ್ಲ. ನಮ್ಮ ಜಾಗ ಕಾವಲು ಕಾಯ್ತಿದಾರೇಂತ
ಯಜಮಾನರು ಹೇಳಿದರಾಯ್ತು.”
ಅಂತಹ ಲೋಕಾನುಭವ ರಾಧಮ್ಮನಿಗಾಗಲೀ ಸುನಂದೆಗಾಗಲೀ ಇರಲಿಲ್ಲ. ಆ
ರೀತಿಯ ಪರಿಸ್ಥಿತಿಯನ್ನು ಅವರೆಂದೂ ಎದುರಿಸಿಯೂ ಇರಲಿಲ್ಲ. ಇನ್ನೂ ಯುವತಿ
ಯಂತೆಯೇ ತೋರುತ್ತಿದ್ದ ಬಲವಾದ ಮೈ ಕಟ್ಟಿದ್ದ ಆ ಹೆಣ್ಣಿನ ಧೈರ್ಯವನ್ನು ಇಬ್ಬರು
ಹೆಂಗಸರೂ ಮೆಚ್ಚಿದರು.
ತನ್ನ ಮಾತನ್ನು ಅಲ್ಲಗಳೆಯುವ ಉತ್ತರ ಬರದೆ ಇದ್ದಾಗ ಆ ಹೆಂಗಸು
ಕೇಳಿದಳು:
“ಅಮ್ಮಾ, ಆ ಜಾಗದ ಯಜಮಾನರು ಯಾರು?”
“ಇದೇ ಬೀದೀಲಿ ಮೇಲ್ಗಡೆ ಇದಾರೆ-ನಾಗೇಂದ್ರಪ್ಪ ಅಂತ. ಹೋಗಿ ಅಲ್ಲೇ
ವಿಚಾರಿಸಿ. ಅವರು ಒಪ್ಪಿದರೆ ನಮ್ಮದೇನೂ ಆಕ್ಷೇಪವಿಲ್ಲ,”
-ಎಂದರು ರಾಧಮ್ಮ. ಆ ಸಂಸಾರ ಸಮೀಪದಲ್ಲೇ ಇದ್ದರೆ ಬಿಟ್ಟಿ ಚಾಕರಿಗೆ
ಆಳು ದೊರಕಬಹುದೆಂದು ಆಕೆ ಯೋಚಿಸಿದರೆಂದಲ್ಲ. ಆ ಭಾಗ್ಯವೆಲ್ಲ ಸೈಟಿನ ಯಜ
ಮಾನರಾದ ನಾಗೇಂದ್ರಪ್ಪನವರಿಗೇ ಎಂಬುದು ಆಕೆಗೆ ಗೊತ್ತಿತ್ತು.
ಆ ಹೆಂಗಸು ತನ್ನ ಸಂಸಾರದ ಕತೆ ಹೇಳಿದಳು. ನಡುನಡುವೆ “ಕುಡುಕ” ಎಂದು
ತನ್ನ ಗಂಡನನ್ನು ಜರೆದಳು. ಆಕೆ ಬಯ್ದಾಗ ಆತ ಮುಖ ಊದಿಸಿಕೊಂಡು ಕುಳಿತು
ಕೊಳ್ಳುತ್ತಿದ್ದ, ಆಕೆ ಅತ್ತಾಗ ಆತನೂ, “ದೇವರು ಹೀಗೆ ಮಾಡಿದ” ಎಂದು ದೂರು
ಕೊಡುತ್ತಾ, ಒಂದೆರಡು ಮಾತು ಆಡುತ್ತಿದ್ದ.
ತಮಿಳುನಾಡಿನಿಂದ ಉದ್ಯೋಗವನ್ನರಸುತ್ತ ಗುಳೆ ಹೊರಟ ಹಲವು ಸಹಸ್ರ
ಕುಟುಂಬಗಳಲ್ಲಿ ಅವರದೂ ಒಂದು. ಮೂಲತಃ ಹಳ್ಳಿಯ ಜನ. ಅವರು ಬೇಸಾಯ
ಮಾಡುತ್ತಿದ್ದ ಹೊಲದಲ್ಲಿ ಉತ್ಪನ್ನವಾಗುತ್ತಿದ್ದುದು ಸ್ವಲ್ಪ. ಗೇಣಿ ಕೊಟ್ಟಮೇಲೆ
ಏನೂ ಉಳಿಯುತ್ತಿರಲಿಲ್ಲ. ಕೊಯಮತ್ತೂರಿಗೆ ಹೋಗಿ ಕೂಲಿಕಾರರಾಗಬೇಕೆಂದು
ಆ ಪ್ರದೇಶದಿಂದ ಹೊರಬಿದ್ದ ಹಲವು ಸಂಸಾರಗಳ ಜತೆ ಅವರೂ ಹೊರಟರು-ಗಂಡ,
ಹೆಂಡತಿ ಮತ್ತು ಮಗ. ಬಹಳ ಕಷ್ಟ ಪಟ್ಟಮೇಲೆ ಕೆಲಸ ದೊರೆಯಿತು. ಹಾಗೆ ದಿನ