ಪುಟ:ಪಾಲಿಗೆ ಬಂದ ಪಂಚಾಮೃತ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

57

ತಳ್ಳುತ್ತಿದ್ದಾಗ ಒಂದು ಹೆಣ್ಣು ಮಗು ಹುಟ್ಟಿತು. ಕೆಲವು ತಿಂಗಳಲ್ಲೆ ಮಿಲ್ಲುಗಳ ಒಡೆ
ಯರು ದುಡಿಯುವವರ ಸಂಖ್ಯೆಯನ್ನು ಕಡಮೆ ಮಾಡಿದುದರಿಂದ ಆ ದಂಪತಿಯ
ಕೆಲಸ ಹೋಯಿತು....ಮತ್ತೆ ಅಲೆದಾಟ ... ಊರೂರು ಸುತ್ತಿದ ಮೇಲೆ ಕೋಲಾರದ
ಬಂಗಾರದ ಬಯಲು ಬಂತು. ಆ ನೆಲ ಚಿನ್ನದ ಹಾಗೆ ಹೊಳೆಯುತ್ತಿರಲಿಲ್ಲ—ಬದಲು
ಕಪ್ಪಗಿತ್ತು, ಅವರ ಮೈಬಣ್ಣಕಿಂತಲೂ ಕಪ್ಪು. ಅಲ್ಲದೆ, ಅಲ್ಲಿ ಕೆಲಸವಿರಲಿಲ್ಲ. ಬಳಿಕ
ಆ ಊರಿನಿಂದ ಈ ಊರಿಗೆ...
ಒಂದು ವರ್ಷ ದಾಟಿದ್ದ ಪುಟಾಣಿ ಹೆಣ್ಣು ಮಗುವನ್ನು ಎತ್ತಿಕೊಂಡೇ ಇದ್ದಳು
ಆ ತಾಯಿ. ಹುಡುಗನಿಗೆ ಎಂಟೊ ಹತ್ತೊ ವರ್ಷ ವಯಸ್ಸಾದ ಹಾಗಿತ್ತು. ಆಕೆಯ
ಗಂಡ ಗಟ್ಟಿಮುಟ್ಟಾದ ಆಳೇ-ಮೂವತ್ತೈದರ ಒಳಗೆ...
“ಇಲ್ಲೇನು ಕೆಲಸ ಮಾಡ್ತೀರಾ?"
—ಎಂದು ಕೇಳಿದಳು ಸುನಂದಾ. “ಇಂಗೆ ಏನ್ ಕೆಲಸ ಶೆಯ್ವಿರಿ?" ತಪ್ಪು
ತಪ್ಪು ತಮಿಳು. ಹಿಂದೆ ಸಿನಿಮಾ ನೋಡಿ ಕಲಿತುದು.
ಆದರೆ ದುಡಿಯುವ ಇನ್ನೊಂದು ಜೀವಕ್ಕೆ ಅದು ಅರ್ಥವಾಗಿ, ಆಕೆ ಎಂದಳು:
“ಮಿಲ್ನಲ್ಲಿ ಕೆಲಸ ಸಿಕ್ಕಿದರೆ ಇಬ್ಬರೂ ಹೋಗ್ತೀವಿ. ನಿಮ್ಮನೆ ಚಾಕರಿಯೆಲ್ಲ
ಮಾಡ್ಕೊಟ್ಟು ನಾನು ಮಿಲ್ಲಿಗೆ ಹೋಗ್ತೀನಿ. ಇಲ್ದೆಹೋದ್ರೆ ಇಲ್ಲ. ಇವನಿಗೆ ಸೌದೆ
ಒಡೆಯೋಕೆ ಬರ್ತದೆ. ಹಮಾಲಿ ಕೆಲಸಾನೂ ಮಾಡ್ತಾನೆ. ನನ್ನ ಮಗನೂ ಟೇಸನ್
ಗೀಸನ್‌ಗೆ ಹೋಗಿ ಸಂಪಾದಿಸ್ತಾನೆ...ದೇವರು ಏನಾದರೂ ಮಾರ್ಗ ತೋರಿಸದೆ
ಇರ್ತಾನೇನಮ್ಮಾ?”
....ಆ ನಾಲ್ವರ ಸಂಸಾರ, ನಿವೇಶನದ ಒಡೆಯರಾದ ನಾಗೇಂದ್ರಪ್ಪನವರತ್ತ
ಹೊರಟಿತು. ಹೋಗುತ್ತ ಆ ಹೆಂಗಸು ಹೇಳಿದಳು:
“ಅಲ್ಲಿಗೆ ಹೋಗಿ ಬರ್ತೀವಿ ಅಮ್ಮ. ಯಜಮಾನರ್ನ ಕೇಳ್ಕೊಂಡು ಬರ್ತೀವಿ.”
ಸುನಂದಾ ಯೋಚಿಸಿದಳು: ಆ ಹೆಂಗಸು ವಿದ್ಯಾವತಿಯಾಗಿದ್ದರೆ ಖಂಡಿತ ರಾಗ
ವೆಳೆಯುತಿದ್ದಳು—'ನಿಮಗೆ ತೊಂದರೆ ಕೊಟ್ಟೆವು, ಕ್ಷಮಿಸಿ,' ಎಂತಲೋ, 'ತುಂಬಾ
ಥ್ಯಾಂಕ್ಸ್' ಎಂತಲೋ.
ರಾಧಮ್ಮನ ಮಗ ಶ್ಯಾಮ ಆವರೆಗೂ ಸುಮ್ಮನಿದ್ದವನು “ಇಸ್ಸಿಸ್ಸೀ” ಎಂದು
ಮೂಗಿನಿಂದ ಸ್ವರ ಹೊರಡಿಸಿದ.
“ಏನೋ ಅದು?”
—ಎಂದು ಆತನ ತಾಯಿ ಕೇಳಿದರು.
“ಅವರು ಬರೇ ಕೊಳಕು. ಘಂ ಅಂತ ವಾಸನೆ ಹೊಡೀತಿತ್ತು ಮೂಗಿಗೆ!
ಅಬ್ಬ!"
ರಾಧಮ್ಮನಿಗೆ ನಗು ಬಂತು.

8